ಗುರುವಾಯೂರು (ಕೇರಳ): ಇನ್‌ಸ್ಟಾಗ್ರಾಂ ಇನ್ಫ್ಲೂಯೆನ್ಸರ್ ಹಾಗೂ ಮಾಜಿ ಬಿಗ್‌ಬಾಸ್ ಮಲಯಾಳಂ ಸ್ಪರ್ಧಿ ಜಾಸ್ಮಿನ್ ಜಾಫರ್ ಅವರ ವೈರಲ್ ರೀಲ್ ಹಿನ್ನೆಲೆಯಲ್ಲಿ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಭಾರಿ ವಿವಾದ ಉಂಟಾಗಿದೆ.
ದೇವಾಲಯದ ಪವಿತ್ರ ಕೆರೆಯಲ್ಲಿ ಪಾದಗಳನ್ನು ಮುಳುಗಿಸಿ ವಿಡಿಯೋ ಚಿತ್ರೀಕರಿಸಿದ ಅವರ ಕೃತ್ಯ ಭಕ್ತರು ಹಾಗೂ ಸಾಂಸ್ಕೃತಿಕ ವಲಯಗಳಿಂದ ತೀವ್ರ ವಿರೋಧಕ್ಕೆ ಗುರಿಯಾಗಿದೆ.
ಈ ಹಿನ್ನೆಲೆ ಗುರುವಾಯೂರು ದೇವಸ್ವಂ ಆರು ದಿನಗಳ ಶುದ್ಧೀಕರಣ ವಿಧಿಯನ್ನು ಘೋಷಿಸಿದೆ. 18 ವಿಶೇಷ ಪೂಜೆ ಹಾಗೂ 18 ಶೀವೇಲಿ ಒಳಗೊಂಡ ಈ ವಿಧಿ ಇಂದಿನಿಂದ ಪ್ರಾರಂಭವಾಗಲಿದ್ದು, ಈ ಅವಧಿಯಲ್ಲಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.
ದೇವಸ್ವಂ ಆಡಳಿತವು ದೇವಸ್ಥಾನದ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದ್ದು, ಪವಿತ್ರ ಪ್ರದೇಶಗಳಲ್ಲಿ ಛಾಯಾಚಿತ್ರಣ ನಿಷೇಧಿಸಿರುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದೆ.
ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಜಾಸ್ಮಿನ್ ಜಾಫರ್ ಕ್ಷಮೆಯಾಚನೆ ಮಾಡುತ್ತಾ, “ಅಜ್ಞಾನದಿಂದ ನಡೆದ ತಪ್ಪು, ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ” ಎಂದು ತಿಳಿಸಿದ್ದಾರೆ.
ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಕೇರಳದ ಅತ್ಯಂತ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.