ಮಂಗಳೂರು: ಈ ಹಿಂದೆ ಶಬರಿ ಮಲೆ ಕ್ಷೇತ್ರದ ಹೆಸರನ್ನು ಕೆಡಿಸಲು ಯತ್ನಿಸಲಾಗಿತ್ತು. ಆದರೆ ಇದೀಗ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಕೆಡಿಸುವ ಷಡ್ಯಂತ್ರವನ್ನು ಹೆಣೆದಿರುವ ಅನುಮಾನವಿದೆ. ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಎಐ ವಿಡಿಯೋಗಳನ್ನು ಮಾಡಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು, ಜನರಲ್ಲಿ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡುವಂತೆ ಷಡ್ಯಂತ್ರ ಹೆಣೆಯಲಾಗಿದೆ. ವಾಸ್ತವವನ್ನು ಬದಲಾಯಿಸಿ, ಜನರಿಗೆ ಕೆಟ್ಟ ಭಾವನೆ ಬರುವಂತೆ ಮಾಡುವುದು ಅವರ ಗುರಿಯಾಗಿದೆ. ಇದಕ್ಕಾಗಿ ಯಾರೂ ಹಣ ವಿನಿಯೋಗಿಸಿರುವ ಸಾಧ್ಯತೆ ಇದೆ. ಹಾಗಾಗಿ ಪ್ರಕರಣದ ಎನ್‌ಐಎ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತ್ರವನ್ನು ಬಯಲುಗೊಳಿಸಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ರೀತಿ ಎಐ ವಿಡಿಯೋಗಳನ್ನು ಮಾಡಲು ಸಾಕಷ್ಟು ಹಣ ಬೇಕಾಗುತ್ತದೆ. ಚಾಟ್ ಜಿಪಿಟಿಯಂತಹ ಎಐ ಟೂಲ್‌ಗಳಲ್ಲಿ ವಿಡಿಯೋ ಸೃಷ್ಟಿಸಬೇಕಾದರೂ ಸಾಕಷ್ಟು ಹಣ ಪಾವತಿ ಮಾಡಬೇಕು. ಇನ್ಸ್ಟಾಗ್ರಾಂ, ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ಹಾಕಿದ ವಿಡಿಯೋಗಳನ್ನು ಪುಷ್ ಮಾಡ್ಬೇಕಾದ್ರೂ ಸಾಕಷ್ಟು ದುಡ್ಡು ಬೇಕಾಗುತ್ತದೆ. ಈ ಸುದ್ದಿಗಳು ಬಿಬಿಸಿ, ಅಲ್‌ಜಜಿರಾದಂತಹ ಇಂಟರ್ನಾಷನಲ್ ಟಿವಿ ಚಾನೆಲ್‌ಗಳಲ್ಲಿಯೂ ಬರ್ತದೆ ಅಂದರೆ ನಮಗೆ ಇನ್ನೂ ಡೌಟ್ ಬರುವುದಿಲ್ಲ ಅಂದ್ರೆ ಹೇಗೆ? ಹಾಗಾದ್ರೆ ನಾವು ಇನ್ನೂ ನಿದ್ದೇ ಮಾಡ್ಬೇಕಾ? ಎಂದು ಭರತ್ ಪ್ರಶ್ನಿಸಿದರು.
ಸಮೀರ್ ವಿಡಿಯೋ ಮಾಡಿ ಇಷ್ಟು ದಿನವಾದ್ರೂ ರಾಜ್ಯ ಸರ್ಕಾರ ಅವನ್ನು ಯಾಕೆ ಬಂಧಿಸಿಲ್ಲ? ಅವನ ಮೇಲೆ ಯಾಕೆ ಸುಮೊಟೋ ಕೇಸ್ ದಾಖಲಿಸಿಲ್ಲ? ಎಸ್‌ಐಟಿ ರಚನೆಯಾದ ಹದಿನೈದು ದಿನ ಅವನ ವಿಡಿಯೋಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ನಾವು ಅಸೆಂಬ್ಲಿಯಲ್ಲಿ ಇದನ್ನು ಪ್ರಶ್ನಿಸಿದ ಬಳಿಕ ಅವನ ವಿಚಾರಣೆ ನಡೆಯುತ್ತಿದೆ. ಸುಜಾತ ಭಟ್ ಕೂಡಾ ಸುಳ್ಳು ಹೇಳಿಕೆ ನೀಡ್ತಾ ಇರುವುದು ಮಾಧ್ಯಮಗಳಿಂದ ಗೊತ್ತಾಗುತ್ತಿದೆ. ಈ ಪ್ರಕರಣದಲ್ಲಿ ದೇವಸ್ಥಾನವನ್ನು ಗುರಿಯಾಗಿಸಿ ಷಡ್ಯಂತ್ರ ಹೆಣೆಯಲಾಗಿದೆ ಎಂದು ಭರತ್ ಆರೋಪಿಸಿದರು.
ಇದರಲ್ಲಿ ಸಾಕಷ್ಟು ಹರಿದಾಡಿರುವ ಸಂಶಯವಿರುವುದರಿಂದ ಸಂಸದ ಶ್ರೀನಿವಾಸ ಪೂಜಾರಿ ಅವರು ಪ್ರಕರಣದ ಇ.ಡಿ. ತನಿಖೆ ನಡೆಸುವಂತೆ ಕೇಳಿದ್ದಾರೆ. ಪ್ರಕರಣವನ್ನು ಇಂಟರ್ನ್ಯಾಷನಲ್ ಇಶ್ಯೂ ಮಾಡಲು ಷಡ್ಯಂತ್ರ ಮಾಡಲಾಗಿದೆ ಎಂದು ಸ್ವತಃ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಬೇರೆ ಬೇರೆ ರಾಜ್ಯಗಳವರು ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಎಸ್‌ಐಟಿ ತನಿಖೆ ಒಂದು ಸೀಮಿತ ಮಟ್ಟದಲ್ಲಿ ನಡೆಯುವುದರಿಂದ, ಪ್ರಕರಣದ ವಿಸ್ತಾರಿತ ತನಿಖೆಯ ಅಗತ್ಯವಿರುವುದರಿಂದ ಎನ್‌ಐಎ ಅಥವಾ ಸಿಬಿಐಯಂತಹಾ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಸೌಜನ್ಯ ಪ್ರಕರಣದ ಮರುತನಿಖೆ ಆಗಲಿ:
ಸೌಜನ್ಯ ಪ್ರಕರಣದ ಕುರಿತಂತೆ ಹೇಳಿಕೆ ನೀಡಿದ ಅವರು, ಬೇಕಾದ್ರೆ ಈ ಪ್ರಕರಣಕ್ಕೂ ಸರ್ಕಾರ ಒಂದು ಎಸ್‌ಐಟಿ ರಚನೆ ಮಾಡಲಿ. ಸೌಜನ್ಯ ಪ್ರಕರಣದಲ್ಲಿ ಯಾರಲ್ಲಾದರೂ ಏನಾದ್ರೂ ಸಾಕ್ಷಿ ಇದ್ರೆ ಕೊಡಲಿ. ಮರು ತನಿಖೆ ಮಾಡುವುದಾದ್ರೂ ಮಾಡಲಿ. ಇದನ್ನು ನಾವು ಹಿಂದೆಯೇ ನಿಯೋಗದೊಂದಿಗೆ ಭೇಟಿ ಮಾಡಿ ಸಿಎಂ ಅವರಲ್ಲಿಯೂ ಹೇಳಿದ್ದೇವೆ. ಆದರೆ ಧರ್ಮಸ್ಥಳ ಪ್ರಕರಣದಲ್ಲಿ ಅವರ ಉದ್ದೇಶ ಏನೆಂದು ಸ್ಪಷ್ಟವಾಗಬೇಕು ಎಂದರು.
ಈ ಪ್ರಕರಣದಲ್ಲಿ ತಿಮರೋಡಿ ಪಾತ್ರದ ಬಗ್ಗೆ ಮಾಧ್ಯದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಭರತ್, ತಿಮರೋಡಿ ಬಗ್ಗೆ ನಾವು ಒಂದೇ ಒಂದು ಶಬ್ದ ಮಾತಾಡಿಲ್ಲ, ಸಮೀರ್ ಬಗ್ಗೆ ಮಾತ್ರ ಹೇಳಿದ್ದೇವೆ. ತನಿಖೆಯಲ್ಲಿ ತಿಮರೋಡಿ ಪಾತ್ರದ ಬಗ್ಗೆ ಗೊತ್ತಾದರೆ ಆಗ ಹೇಳ್ತೇವೆ ಎಂದು ಭರತ್ ಶೆಟ್ಟಿ ಹೇಳಿದರು.