ನವದೆಹಲಿ: ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ, ಡ್ರೀಮ್ 11 ಗೇಮಿಂಗ್ ವೇದಿಕೆ ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಪ್ರಾಯೋಜಕ ಸ್ಥಾನದಿಂದ ಹಿಂದೆ ಸರಿದಿದೆ. ಆದರೆ ಡ್ರೀಂ11ಗೆ ದಂಡ ವಿಧಿಸಲು ಬಿಸಿಸಿಐಗೆ ಅವಕಾಶವಿಲ್ಲ.
ಡ್ರೀಮ್11 ಪ್ರತಿನಿಧಿಗಳು ಬಿಸಿಸಿಐ ಕಚೇರಿಗೆ ಬಂದು CEO ಹೇಮಾಂಗ್ ಅಮೀನ್ ಅವರಿಗೆ ತಮ್ಮ ಪ್ರಾಯೋಜಕತ್ವವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದರಿಂದ ಏಷ್ಯಾಕಪ್‌ಗೆ ಅವರು ತಂಡದ ಪ್ರಾಯೋಜಕರಾಗುವುದಿಲ್ಲ. ಬಿಸಿಸಿಐ ಶೀಘ್ರದಲ್ಲೇ ಹೊಸ ಟೆಂಡರ್ ಆಹ್ವಾನಿಸಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೀಂ ಇಲೆವೆನ್ ಬಿಸಿಸಿಐ ಜೊತೆ ₹358 ಕೋಟಿ ಮೌಲ್ಯದ ಒಪ್ಪಂದದಲ್ಲಿತ್ತು. ಆದರೆ ನೂತನ ಗೇಮಿಂಗ್ ಕಾಯ್ದೆಯ ಪ್ರಕಾರ ಬಿಸಿಸಿಐ ಮೂಲ ವ್ಯವಹಾರಕ್ಕೆ ಅಡ್ಡಿಯಾದರೂ ಡ್ರೀಮ್11ಗೆ ಯಾವುದೇ ದಂಡ ವಿಧಿಸಲು ಅವಕಾಶವಿಲ್ಲ ಎನ್ನುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.
ಡ್ರೀಮ್11 ಕೇವಲ ಬಿಸಿಸಿಐ ಮಾತ್ರವಲ್ಲದೆ, ಐಪಿಎಲ್ ತಂಡಗಳು, ಅಂತರರಾಷ್ಟ್ರೀಯ ಲೀಗ್‌ಗಳು ಮತ್ತು ಹಲವು ಕ್ರಿಕೆಟಿಗರಿಗೂ ಪ್ರಾಯೋಜಕತ್ವ ವಹಿಸಿತ್ತು. ಎಂ.ಎಸ್. ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಋಷಭ್ ಪಂತ್, ಜಸ್ಪ್ರೀತ್ ಬುಮ್ರಾ ಇದರ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದಾರೆ. 2020ರಲ್ಲಿ ವಿವೋ ಹಿಂದೆ ಸರಿದಾಗ ಡ್ರೀಮ್11 ಐಪಿಎಲ್ ಪ್ರಾಯೋಜಕತ್ವ ವಹಿಸಿತ್ತು.
ಹೊಸ ಗೇಮಿಂಗ್ ಕಾಯ್ದೆಯ ಪ್ರಕಾರ, ನಿಯಂತ್ರಣವಿಲ್ಲದ ಆನ್‌ಲೈನ್ ಹಣದ ಆಟಗಳು ಹಣಕಳವು, ತೆರಿಗೆ ತಪ್ಪಿಸುವಿಕೆ, ಉಗ್ರ ಚಟುವಟಿಕೆಗಳಿಗೆ ಹಣ ಒದಗಿಸುವಿಕೆ ಮುಂತಾದ ಅಕ್ರಮಗಳಿಗೆ ಕಾರಣವಾಗುತ್ತವೆ. ಇದರಿಂದ ರಾಷ್ಟ್ರ ಭದ್ರತೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟಾಗುತ್ತದೆ ಎಂದು ಸರ್ಕಾರ ತಿಳಿಸಿದೆ.