ಸುರತ್ಕಲ್: ಸಮುದ್ರಕ್ಕೆ ಇಳಿದಿದ್ದ ನಾಲ್ವರ ಪೈಕಿ ಓರ್ವ ಮೃತಪಟ್ಟು, ಮೂವರನ್ನು ರಕ್ಷಿಸಿದ ಘಟನೆ ಸಸಿಹಿತ್ಲು ಮೂಂಡಾ ಬೀಚ್ ಬಳಿ ಭಾನುವಾರ ಸಂಜೆ ಸಂಭವಿಸಿದೆ. ಪಡುಪಣಂಬೂರು ಕಜಕತೋಟ ನಿವಾಸಿ ದಿ.ಅನ್ವರ್ ಎಂಬವರ ಪುತ್ರ ಮುಹಮ್ಮದ್ ಸಮೀರ್ (23) ಮೃತ ದುರ್ದೈವಿ.
ಪಡುಪಣಂಬೂರು ಕಜಕತೋಟ ನಿವಾಸಿ ಅಬೂಬಕರ್ ಎಂಬವರ ಪುತ್ರ ಐಮಾನ್ (23), ಕಜಕತೋಟ ನಿವಾಸಿ ರಯೀಸ್ (22), ಹಳೆಯಂಗಡಿ ಬೊಳ್ಳೂರು ನಿವಾಸಿ ಹನೀಫ್ ಎಂಬವರ ಪುತ್ರ ಫಾಝಿಲ್ ರಕ್ಷಿಸಲ್ಪಟ್ಟವರು.
ಭಾನುವಾರ ಸಂಜೆ ಒಂದೇ ಕುಟುಂಬದ ಆರು ಮಂದಿ ಸಹೋದರರ ಮಕ್ಕಳು ಸಸಿಹಿತ್ಲು ಮೂಂಡಾ ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದರು. ಎಲ್ಲರೂ ಜೊತೆಯಾಗಿ ನೀರಿನಲ್ಲಿ ಆಡುತ್ತಿದ್ದ ಸಂದರ್ಭ ಬೃಹತ್ ಅಲೆಯ ಸೆಳೆತಕ್ಕೆ ಸಿಲುಕಿ ಮುಹಮ್ಮದ್ ಸಮೀರ್, ಐಮಾನ್, ಫಾಝಿಲ್ ಸಮುದ್ರ ಪಾಲಾಗಿದ್ದಾರೆ. ಆಗ ದಡದಲ್ಲಿದ್ದವರು ಬೊಬ್ಬೆ ಹಾಕಿದ್ದು, ಬೊಬ್ಬೆಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ಮೀನುಗಾರ ನಿವಾಸಿಗಳು ಮೂವರನ್ನೂ ರಕ್ಷಿಸಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.