ಚಿತ್ರದುರ್ಗ: ಪದವಿ ವಿದ್ಯಾರ್ಥಿನಿ ವರ್ಷಿತಾಳನ್ನು ಅತ್ಯಾ*ಚಾರಗೈದು ಕೊಲೆ ಮಾಡಿದ ಬಳಿಕ ಶವಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದ ಅಮಾನುಷ ಕೃತ್ಯ ಇಂದು ಮುಂಜಾನೆ ಬೆಳಕಿಗೆ ಬಂದಿದ್ದು ತನಿಖೆ ನಡೆಸಿದ ಪೊಲೀಸರು ವರ್ಷಿತಾಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಚೇತನ್ ಎಂಬಾತನನ್ನು ಬಂಧಿಸಿದ್ದಾರೆ. ವರ್ಷಿತಾ ಬೇರೆ ಹುಡುಗರ ಜೊತೆ ಮಾತಾಡುತ್ತಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಚೇತನ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೋವೇರಹಟ್ಟಿ ಮೂಲದ 19 ವರ್ಷದ ವರ್ಷಿತಾಳನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಚಿತ್ರದುರ್ಗ ನಗರದ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ವರ್ಷಿತಾ ಶವ ಅತ್ಯಾಚಾರಗೈದ ಸ್ಥಿತಿಯಲ್ಲಿ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿತ್ತು.
ವರ್ಷಿತಾ ಜತೆ ಸ್ನೇಹದಲ್ಲಿದ್ದ ಚೇತನ್ ಈ ಕೃತ್ಯ ಎಸಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಚೇತನ್ ಮೂರನೇ ಹಂತದ ಕ್ಯಾನ್ಸರ್ ರೋಗಿಯಾಗಿದ್ದಾನೆ.