ಮಂಗಳೂರು: ಕೇರಳದ ಚಿನ್ನದ ವ್ಯಾಪಾರಿಯನ್ನು ಮಂಗಳೂರಿನಿಂದ ಕಾರಿನಲ್ಲಿ ಅಪಹರಿಸಿದ ತಂಡ ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ಕರೆದೊಯ್ದು ಅವರಲ್ಲಿದ್ದ 350 ಗ್ರಾಂ ಚಿನ್ನದ ಗಟ್ಟಿಯನ್ನು ಅಪಹರಿಸಿದ ಘಟನೆ ಬುಧವಾರ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶ್ರೀಹರಿ ಎಂಬವರು ಆ.13ರ ಬೆಳಗ್ಗೆ 7ಕ್ಕೆ ವ್ಯಾಪಾರ ನಿಮಿತ್ತ 350 ಗ್ರಾಂ ಚಿನ್ನದ ಗಟ್ಟಿಯ ಜೊತೆಗೆ ರೈಲಿನ ಮೂಲಕ ಕೇರಳದಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ರಿಕ್ಷಾಕ್ಕೆ ಕಾಯುತ್ತಿದ್ದಾಗ ಇನೋವಾ ಕಾರಿನಲ್ಲಿ ಬಂದ ತಂಡ ಕಸ್ಟಮ್ಸ್ ಅಧಿಕಾರಿಗಳು ಎಂದು ಬೆದರಿಸಿ ಬಲವಂತವಾಗಿ ಕಾರಿನೊಳಗೆ ತಳ್ಳಿ ಅಪಹರಿಸಿದ್ದಾರೆ. ಬಳಿಕ ಶಿರಸಿಗೆ ಕರೆದುಕೊಂಡು ಹೋಗಿ 35 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನದ ಗಟ್ಟಿಯನ್ನು ದರೋಡೆಗೈದಿದ್ದಾರೆ. ನಂತರ ಚಿನ್ನದ ವ್ಯಾಪಾರಿಯನ್ನು ಶಿರಸಿ ಅಂತ್ರವಳ್ಳಿ ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಶ್ರೀಹರಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.