ನವದೆಹಲಿ: ಭಾರತ ಎ ಮಹಿಳಾ ಕ್ರಿಕೆಟ್ ತಂಡ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಟಿ20 ಸರಣಿಯ ಸೋಲಿನೊಂದಿಗೆ ಈ ಪ್ರವಾಸವನ್ನು ಪ್ರಾರಂಭಿಸಿದ್ದ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ರೋಚಕ ಗೆಲುವಿನ ಮೂಲಕ ಬಲವಾದ ಪುನರಾಗಮನ ಮಾಡಿದೆ. ಎರಡು ತಂಡಗಳ ನಡುವೆ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ, ಭಾರತದ ಎ ತಂಡವು ಆಸ್ಟ್ರೇಲಿಯಾ-ಎ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ 2 ವಿಕೆಟ್‌ಗಳ ರೋಮಾಂಚಕ ಜಯ ಸಾಧಿಸಿತು. ಈ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ ವನಿತಾ ಪಡೆ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಮಿನ್ನು ಮಣಿ ಮಾಂತ್ರಿಕ ಬೌಲಿಂಗ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ-ಎ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 265 ರನ್ ಗಳಿಸಿತು. ತಂಡದ ಪರ ಅಲಿಸಾ ಹೀಲಿ 91 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಕಿಮ್ ಗಾರ್ತ್ ಅಜೇಯ 41 ರನ್‌ಗಳ ಕಾಣಿಕೆ ನೀಡಿದರು. ಇವರನ್ನು ಹೊರತುಪಡಿಸಿ, ಯಾವುದೇ ಬ್ಯಾಟರ್ಗೆ 30 ರನ್‌ಗಳ ಗಡಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಭಾರತ-ಎ ಪರ ಮಿನ್ನು ಮಣಿ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್‌ಗಳನ್ನು ಪಡೆದರು. ಇವರಲ್ಲದೆ ಸೈಮಾ ಠಾಕೂರ್ ಕೂಡ 2 ವಿಕೆಟ್‌ಗಳನ್ನು ಪಡೆದರೆ, ಟೈಟಾಸ್ ಸಾಧು, ರಾಧಾ ಯಾದವ್, ಪ್ರೇಮಾ ರಾವತ್ ಮತ್ತು ತನುಜಾ ಕನ್ವರ್ ತಲಾ 1 ವಿಕೆಟ್ ಪಡೆದರು.
ಭಾರತಕ್ಕೆ ರೋಚಕ ಜಯ
ಗುರಿಯನ್ನು ಬೆನ್ನಟ್ಟಿದ ಭಾರತ-ಎ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಒಂದು ಹಂತದಲ್ಲಿ ಸ್ಕೋರ್ 6 ವಿಕೆಟ್ ನಷ್ಟಕ್ಕೆ 157 ರನ್ ಆಗಿತ್ತು. ಆದಾಗ್ಯೂ ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಯಸ್ತಿಕಾ ಭಾಟಿಯಾ 66 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಅವರಿಗೆ ಅಗ್ರ ಕ್ರಮಾಂಕದಲ್ಲಿ ಯಾರಿಂದಲೂ ಯಾವುದೇ ಬೆಂಬಲ ಸಿಗಲಿಲ್ಲ. ಆದಾಗ್ಯೂ, ಕೆಳ ಕ್ರಮಾಂಕದ ಆಟಗಾರ್ತಿ ರಾಧಾ ಯಾದವ್ 60 ರನ್ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಕೊನೆಯಲ್ಲಿ ತನುಜಾ ಕನ್ವರ್ 50 ರನ್ ಗಳಿಸಿದರೆ, ಪ್ರೇಮಾ ರಾವತ್ ಅಜೇಯ 32 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಭಾರತ-ಎ ತಂಡಕ್ಕೆ ಗೆಲುವು ತಂದುಕೊಟ್ಟರು.
ಸರಣಿಯಲ್ಲಿ 2-0 ಮುನ್ನಡೆ
ಈ ಗೆಲುವಿನೊಂದಿಗೆ, ಭಾರತ ಎ ಮಹಿಳಾ ಕ್ರಿಕೆಟ್ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದಕ್ಕೂ ಮೊದಲು, ಭಾರತ ತಂಡವು ಆರಂಭಿಕ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆದ್ದಿತ್ತು. ಈಗ ಉಭಯ ತಂಡಗಳ ನಡುವಿನ ಸರಣಿಯ ಕೊನೆಯ ಪಂದ್ಯ ಆಗಸ್ಟ್ 17 ರಂದು ನಡೆಯಲಿದೆ. ಇದರ ನಂತರ, ಅನಧಿಕೃತ ಟೆಸ್ಟ್ ಪಂದ್ಯವೂ ನಡೆಯಲಿದೆ.