ಬಳ್ಳಾರಿ: ಪಿಎಸ್‌ಐ ಪತಿ ಹಾಗೂ ಇಬ್ಬರು ಮಕ್ಕಳನ್ನು ಸ್ವಾತಂತ್ರ್ಯ ದಿನದ ಧ್ವಜಾರೋಹಣಕ್ಕೆ ಕಳಿಸಿದ ಬಳಿಕಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಮೋಕಾದಲ್ಲಿ ನಡೆದಿದೆ.
ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ಕಾಳಿಂಗ ಪತ್ನಿ ಚೈತ್ರಾ (36) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಸಹೋದರ ಹಾಗೂ ಇಬ್ಬರು ಸಹೋದರಿಯರ ಸಾವಿನಿಂದ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಎನ್ನಲಾಗಿದೆ.
2 ತಿಂಗಳ ಹಿಂದೆ ಚೈತ್ರಾ ಅವರ ಏಕೈಕ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ. 2 ವರ್ಷಗಳ ಅಂತರದಲ್ಲಿ ಇದ್ದ ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರು ಮೃತಪಟ್ಟಿದ್ರು. ಹೀಗಾಗಿ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಅಂತ ತಿಳಿದುಬಂದಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಶಿವಮೊಗ್ಗದಲ್ಲಿ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು. ಚಿಕಿತ್ಸೆ ಕೊಡಿಸಿದ ಬಳಿಕ ನಿನ್ನೆ ಸಂಜೆ ತವರು ಮನೆ ಮಲಪನಗುಡಿಯಿಂದ ಮೋಕಾಗೆ ಬಂದಿದ್ರು. ಮೋಕಾಗೆ ಬಂದಾಗಿನಿಂದ ಪತಿ ಕಾಳಿಂಗ ಹಾಗೂ ಮಕ್ಕಳ ಜೊತೆ ಚೈತ್ರಾ ಚೆನ್ನಾಗಿಯೇ ಇದ್ದರು. ಇಂದು ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ಬೆಳಗ್ಗೆ ಮಕ್ಕಳನ್ನ ರೆಡಿ ಮಾಡಿದ್ದ ಚೈತ್ರಾ ಪತಿಯ ಜೊತೆ ಧ್ವಜಾರೋಹಣಕ್ಕೆ ಕಳಿಸಿದ್ರು. ಮಕ್ಕಳು ಹಾಗೂ ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಚೈತ್ರಾ ನೇಣಿಗೆ ಶರಣಾಗಿದ್ದಾರೆ.