ಬೆಂಗಳೂರು: ʻಆಪರೇಷನ್ ಸಿಂಧೂರ್ʼ ಸಮಯದಲ್ಲಿ ಪಾಕಿಸ್ತಾನದ ಐದು ಫೈಟರ್ ಜೆಟ್‌ಗಳು ಮತ್ತು ಇನ್ನೊಂದು ದೊಡ್ಡ ವಿಮಾನ(ಬಿಗ್ ಬರ್ಡ್) ಸೇರಿದಂತೆ ಆರು ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ. ಈ ಮೂಲಕ ಭಾರತದ ಮೆಗಾ ಮಿಲಿಟರಿ ದಾಳಿಯ ಸಂದರ್ಭ ಪಾಕಿಸ್ತಾನಕ್ಕೆ ಉಂಟಾದ ಹಾನಿಯ ಪ್ರಮಾಣವನ್ನು ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಬಹಿರಂಗಪಡಿಸಿದೆ.
ಆಕಾಶದಲ್ಲಿ ಢಿಕ್ಕಿ ಹೊಡೆಸಿ ಉರುಳಿಸಿದ ಆರು ವಿಮಾನಗಳ ಜೊತೆಗೆ, ಪಾಕಿಸ್ತಾನ ವಾಯುನೆಲೆಗಳ ಮೇಲೆ ನಡೆದ ವೈಮಾನಿಕ ದಾಳಿ ನಡೆಸಿ ಪಾಕಿಸ್ತಾನ ಅಪಾರ ನಷ್ಟ ಅನುಭವಿಸಿದ್ದಾಗಿ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ದೃಢಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವಾರ್ಷಿಕ 16 ನೇ ವಾಯುಪಡೆಯ ಮುಖ್ಯಸ್ಥ ಎಲ್‌ಎಂ ಕತ್ರೆ ಉಪನ್ಯಾಸದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಸಿಂಗ್, ಪಹಲ್ಗಾಮ್ ದಾಳಿಯ ನಂತರ ಮೇ 7 ರಂದು ನಡೆದ ಕಾರ್ಯಾಚರಣೆಯಲ್ಲಿ ನಿರ್ಣಾಯಕ ದಾಳಿಯಲ್ಲಿ ಪಾಕಿಸ್ತಾನದ ವಿಮಾನಗಳು ನೆಲಕ್ಕುರುಳಲು ರಷ್ಯಾ ನಿರ್ಮಿತ ಎಸ್ -400 ಮೇಲ್ಮೈಯಿಂದ ಗಾಳಿಯಿಂದ ಗಾಳಿಗೆ ಹಾರುವ ಕ್ಷಿಪಣಿ ವ್ಯವಸ್ಥೆಯೇ ಕಾರಣ ಎಂದು ಹೇಳಿದರು.
ಪಹಲ್ಗಾಮ್ ದಾಳಿಯ ನಂತರ ನಡೆದ ದಾಳಿಯಿಂದ ಪಾಕಿಸ್ತಾನದ “ಬಿಗ್ ಬರ್ಡ್ʼ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ), ಹಾನಿಗೊಂಡಿದ್ದು, ಇದು ಪಾಕಿಸ್ತಾನದ ವಾಯು ಬಲಕ್ಕೆ ನೀಡಿದ ಭಾರಿ ಹೊಡೆತ ಎಂದರು. ಪಾಕಿಸ್ತಾನದ ಜಕೋಬಾಬಾದ್ ಮತ್ತು ಭೋಲಾರಿಯಲ್ಲಿ ಐಎಎಫ್ ಹ್ಯಾಂಗರ್‌ಗಳನ್ನು ಸಹ ಹೊಡೆದುರುಳಿಸಿತ್ತು. ಕೆಲವು ಯುದ್ಧ ವಿಮಾನಗಳು, ಬಹುಶಃ ಅಮೆರಿಕ ನಿರ್ಮಿತ ಎಫ್-16 ವಿಮಾನಗಳು ಸಹ ವೈಮಾನಿಕ ದಾಳಿಯಲ್ಲಿ ನಾಶವಾದವು. ಭೋಲಾರಿಯಲ್ಲಿ, ಮತ್ತೊಂದು AWACS ವಿಮಾನವೂ ನಾಶವಾಗಿದೆ ಎಂದು ನಂಬಲಾಗಿದೆ ಎಂದರು.
ಭಾರತೀಯ ಪಡೆಗಳು ತುಂಬಾ ನೀಡಿದ ಹೊಡೆತದಿಂದ ಪಾಕಿಸ್ತಾನ ಅಪಾರ ಹಾನಿ ಅನುಭವಿಸಿದೆ. ಭಾರತ ಸಂಘರ್ಷ ಮುಂದುವರಿಸಿದರೆ ಅವರು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಪಾಕಿಸ್ತಾನ ಅರಿತುಕೊಂಡಿತು. ಹೀಗಾಗಿ ಇದು ಪಾಕಿಸ್ತಾನದ ಕಡೆಯವರು ಕದನ ವಿರಾಮವನ್ನು ಕೋರಿಕೊಂಡರು ಎಂದು ಏರ್ ಚೀಫ್ ಮಾರ್ಷಲ್ ಹೇಳಿದರು.
ಪಡೆಗಳಿಗೆ ದಾಳಿಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಕ್ಕಾಗಿ ರಾಜಕೀಯ ನಾಯಕತ್ವವನ್ನು ಸಹ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಸಿಂಗ್ ಅವರು ಶ್ಲಾಘಿಸಿದರು.
“ಯಶಸ್ಸಿಗೆ ಪ್ರಮುಖ ಕಾರಣವೆಂದರೆ ನಮ್ಮ ರಾಜಕೀಯ ಇಚ್ಛಾಶಕ್ತಿ. ನಮಗೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಲಾಗಿತ್ತು. ನಮ್ಮ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಯಾವುದೇ ನಿರ್ಬಂಧಗಳಿದ್ದರೆ, ಅವು ಸ್ವಯಂ ನಿರ್ಮಿತವಾಗಿದ್ದವು. ಯೋಜಿಸಲು ಮತ್ತು ಕಾರ್ಯಗತಗೊಳಿಸಲು ನಮಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ನಾವು ಅತ್ಯಂತ ಪ್ರಬುದ್ಧ ರೀತಿಯಲ್ಲಿ ಹೊಡೆತ ನೀಡಬೇಕೆಂದು ಬಯಸಿದ್ದೆವು. ಹೀಗಾಗಿ ನಾವು ಹಂತ ಹಂತವಾಗಿ ದಾಳಿ ನಡೆಸಿದೆವು ಎಂದು ಏರ್ ಚೀಫ್ ಮಾರ್ಷಲ್ ಸಿಂಗ್ ಹೇಳಿದರು.
ಮೇ 7 ರ ದಾಳಿಯ ಸಮಯದಲ್ಲಿ ದಾಳಿಗೊಳಗಾದ ಭಯೋತ್ಪಾದಕ ಗುರಿಗಳ ‘ಮೊದಲು ಮತ್ತು ನಂತರ’ ಉಪಗ್ರಹ ಚಿತ್ರಗಳನ್ನು ಸಹ ಅವರು ಹಂಚಿಕೊಂಡರು. “ನಮ್ಮಲ್ಲಿ ಉಪಗ್ರಹ ಚಿತ್ರಗಳು ಮಾತ್ರವಲ್ಲದೆ, ಸ್ಥಳೀಯ ಮಾಧ್ಯಮಗಳಿಂದಲೂ ನಾವು ಚಿತ್ರಗಳನ್ನು ಪಡೆಯಬಹುದು” ಎಂದು ವಾಯುಪಡೆಯ ಮುಖ್ಯಸ್ಥರು ಹೇಳಿದರು, ಬಾಲಕೋಟ್ ದಾಳಿಯ ನಂತರ ಅಂತಹ ಪುರಾವೆಗಳಿಲ್ಲದೆ ಜನರನ್ನು ಮನವೊಲಿಸುವುದು ಕಷ್ಟಕರವಾಗಿತ್ತು ಎಂದು ನೆನಪಿಸಿಕೊಂಡರು.
ಆಪ್ ಸಿಂಧೂರ್ ಸಮಯದಲ್ಲಿ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ದಾಳಿ ಮಾಡಿ ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿತು. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತಿಕ್ರಿಯೆಯಾಗಿ ಈ ಬೃಹತ್ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಪಾಕಿಸ್ತಾನ ಸಂಬಂಧಿತ ಭಯೋತ್ಪಾದಕರು ನಮ್ಮ 26 ಅಮಾಯಕ ಜನರನ್ನು ಕೊಂದಿದ್ದರು. ಅದಕ್ಕಾಗಿ ಪ್ರತೀಕಾರ ತೀರಿಸಿದೆವು ಎಂದರು.