ಮಂಗಳೂರು: ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಧರ್ಮಸ್ಥಳ ಕ್ಷೇತ್ರದ ಗೌರವ ಹಾಗು ಘನತೆಯನ್ನು ಕುಗ್ಗಿಸಲೆತ್ನಿಸುತ್ತಿರುವುದು ಅಕ್ಷಮ್ಯ ಅಪರಾಧ . ಮಂಜುನಾಥ ಸ್ವಾಮಿಯ ದೇವಾಲಯ ಭಾರತದ ಪ್ರತಿಷ್ಠಿತ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪೈಕಿ ಒಂದಾಗಿದೆ. ಶ್ರೀ ಕ್ಷೇತ್ರಕ್ಕೆ ವರ್ಷಂಪ್ರತಿ ಜಗತ್ತಿನೆಲ್ಲೆಡೆಯಿಂದ ಕೋಟ್ಯಾಂತರ ಭಕ್ತರು ಆಗಮಿಸಿ ತಮ್ಮ ಆರಾಧ್ಯ ದೇವರ ದರ್ಶನವನ್ನು ಪಡೆಯುತ್ತಾರೆ. 2012ರಲ್ಲಿ ನಡೆದ ಕುಮಾರಿ ಸೌಜನ್ಯಳ ಕ್ರೌರ್ಯಭರಿತ ಹತ್ಯೆಗೆ ಸಂಬಂಧಿಸಿ ಸಮಗ್ರವಾದ ಪಾರದರ್ಶಕ ತನಿಖೆ ನಡೆದು ಅಪರಾಧಿಗಳಿಗೆ ಕಠಿಣಾಧಿ ಕಠಿಣ ಶಿಕ್ಷೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತಲೇ ಬಂದಿದೆ.
ಅಷ್ಟೇ ಅಲ್ಲದೆ ಅಂದಿನಿಂದಲೂ ಆ ನಿಟ್ಟಿನಲ್ಲಿ ನಡೆದ ಎಲ್ಲಾ ಪೂರ್ವಾಗ್ರಹರಹಿತ ಹೋರಾಟಗಳಿಗೆ ತನ್ನ ಬೆಂಬಲವನ್ನೂ ನೀಡಿದೆ. ಇದೀಗ ಅನಾಮಿಕ ಆಘಂತುಕ ವ್ಯಕ್ತಿಯೊಬ್ಬನ ತಾನು 10-20 ವರ್ಷಗಳ ಹಿಂದೆ ನೂರಾರು ಹೆಣಗಳನ್ನು ಧರ್ಮಸ್ಥಳದ ಕಾಡುಗಳಲ್ಲಿ ಹೂತಿದ್ದೇನೆ ಎಂದಿದ್ದಾನೆ. ಈ ಹೇಳಿಕೆಯನ್ನು ಆಧರಿಸಿ ಶ್ರೀಕ್ಷೇತ್ರದ ಘನತೆಗೆ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಸಂಚನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ.
ಹಿಂದೂ ಧರ್ಮಕ್ಕೆ ಸೇರದ ಅನ್ಯಮತೀಯ ಸಂಘಟನೆಗಳ ಪ್ರಮುಖರು, ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಾಹಿನಿ ನಡೆಸುವವರು ಧರ್ಮಸ್ಥಳವನ್ನು ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದನ್ನು ನೋಡಿದಾಗ ಇದೊಂದು ಬಹು ದೊಡ್ಡ ಪಡ್ಯಂತ್ರವೆಂಬುದು ಕಂಡುಬರುತ್ತಿದೆ. ಮಾತ್ರವಲ್ಲದೇ ಇದನ್ನು ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಭಿತ್ತರಿಸುವ ಮೂಲಕ ಇದೊಂದು ಅಂತರಾಷ್ಟ್ರೀಯ ಮಟ್ಟದ ಪಿತೂರಿ ಎಂದು ಹಿಂದೂ ವಿರೋಧಿ ಶಕ್ತಿಗಳು ಸಾಬೀತು ಪಡಿಸುತ್ತಿವೆ. ರಾಜ್ಯ ಸರಕಾರವು SIT ತನಿಖೆಯನ್ನು ಮುಂದುವರಿಸುವಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಘನತೆ ಮತ್ತು ಹಿಂದೂ ಶ್ರದ್ಧೆ – ಭಾವನೆ ನಂಬಿಕೆಗಳಿಗೆ ಅಪಚಾರವಾಗದೇ ಇರುವ ರೀತಿಯಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿ ಸನಾತನ ಧರ್ಮದೊಳಗೆ ಬಿರುಕು ಮೂಡಿಸಲು ಯತ್ನಿಸುತ್ತಿರುವವರ ವಿರುದ್ಧ ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತದೆ.
ವಿಶ್ವ ಹಿಂದೂ ಪರಿಷತ್ ನಿಲುವು ಸ್ಪಷ್ಟವಿದೆ, ಇತ್ತೀಚಿಗೆ ನಡೆಯುತ್ತಿರುವ ಎಲ್ಲಾ ಘಟನೆಗಳ ಸಮಗ್ರ ತನಿಖೆಯಾಗಬೇಕಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು, ಆದರೆ ಧರ್ಮಸ್ಥಳದಂತಹ ಶ್ರದ್ಧಾಕೇಂದ್ರದ ಘನತೆ ಗೌರವಗಳಿಗೆ ಯಾವುದೇ ಹಾನಿಯಾಗಬಾರದು. ಧರ್ಮಸ್ಥಳ ಮಾತ್ರವಲ್ಲದೆ ರಾಜ್ಯ ಹಾಗು ದೇಶದ ಇನ್ನೂ ಆನೇಕ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ಪಿತೂರಿ ಮಾಡುವ ಎಲ್ಲಾ ಅಹಿಂದು- ಆರಾಷ್ಟ್ರೀಯ ಶಕ್ತಿಗಳ ವಿರುದ್ಧ ವಿಶ್ವ ಹಿಂದು ಪರಿಷತ್ ಎಲ್ಲಾ ರೀತಿಯ ಹೋರಾಟ ಮಾಡಲು ಸಿದ್ಧವಿದೆ. ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಅಧ್ಯಕ್ಷರು ದೀಪಕ್ ರಾಜ್ ಗೋಪಾಲ್ ಹಾಗು ವಿಶ್ವ ಹಿಂದೂ ಪರಿಷತ್ತಿನ ನಿಕಟಪೂರ್ವ ಪ್ರಾಂತ ಕಾರ್ಯಾಧ್ಯಕ್ಷರು ಡಾ ಎಂಬಿ ಪುರಾಣಿಕ್ ಜಂಟಿ ಪ್ರಕಟಣೆ ಹೊರಡಿಸಿದ್ದಾರೆ.
prantha-press-dharmasthala-aug2025 (1)