ಮಂಗಳೂರು : ಧರ್ಮಸ್ಥಳ ಕಾಡಿನಲ್ಲಿ ನಿಗೂಢ ವ್ಯಕ್ತಿ ಹೇಳಿದ ಬುರುಡೆ ರಹಸ್ಯ ಬೇಧಿಸಲು ತನಿಖೆಗೆ ನೇಮಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ ರಾಜ್ಯ ಸರಕಾರ ಪೊಲೀಸ್ ಠಾಣಾ ದರ್ಜೆಯ ಅಧಿಕಾರ ನೀಡಿದೆ. ಇದರ ಪ್ರಕಾರ ಪೊಲೀಸ್ ಠಾಣೆಗಿರುವ ಎಫ್ಐಆರ್ ದಾಖಲಿಸಿಕೊಳ್ಳುವುದು ಮತ್ತು ಬಂಧನ, ವಶಕ್ಕೆ ಪಡೆಯುವುದು, ಚಾರ್ಜ್ ಶೀಟ್ ಸಲ್ಲಿಕೆ ಇತ್ಯಾದಿ ಅಧಿಕಾರ ನೀಡಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆ(ಅಪರಾಧಗಳು) ಅಧೀನ ಕಾರ್ಯದರ್ಶಿ ಎಸ್ ಅಂಬಿಕಾ ಅವರು ಆದೇಶ ಹೊರಡಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಕಲಂ 2 (1)(u) ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 142 ಸಿಒಡಿ 2025, ದಿನಾಂಕ:19.07.2025ರ ಆದೇಶದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ(SIT)ವನ್ನು “ಪೊಲೀಸ್ ಠಾಣೆ’ ಎಂದು ಹಾಗೂ ಈ ವಿಶೇಷ ತಂಡಕ್ಕೆ ನೇಮಿಸಲಾದ “ಪೊಲೀಸ್ ನಿರೀಕ್ಷಕರ ದರ್ಜೆಯ / ಮೇಲ್ಪಟ್ಟ ದರ್ಜೆಯ ಅಧಿಕಾರಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಕಲಂ 2(1)()ರಡಿ ಪದತ್ತ ಅಧಿಕಾರದನ್ವಯ “ಠಾಣಾಧಿಕಾರಿ/STATION-HOUSE OFFICER” ಎಂದು ಘೋಷಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಡಿ 142 ಸಿಒಡಿ 2025, ದಿನಾಂಕ:19.07.2025ರಲ್ಲಿ ರಚಿಸಿರುವ ವಿಶೇಷ ತನಿಖಾ ತಂಡ(SIT)ಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಅಡಿಯಲ್ಲಿ ತನಿಖಾ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಅಧಿಸೂಚಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಒಳಾಡಳಿತ ಇಲಾಖೆ (ಅಪರಾಧಗಳು) ಇದರ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಈ ಆದೇಶ ಹೊರಡಿಸಿದ್ದಾರೆ. ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಯಾರಾದರೂ ದೂರು ನೀಡಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದೆಯೂ ಸಹ ಸ್ವತಃ ಎಫ್‌ಐಆರ್ ದಾಖಲಿಸಬಹುದು ಎಂಬ ಮಾಹಿತಿ ಲಭಿಸಿದೆ.