ಮಂಗಳೂರು: ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ, ದಿಢೀರ್ ಬ್ಲಾಕ್ ಮಾಡಿ ರಾ.ಹೆ. 66ರ ಕೆಟ್ಟು ಹೋದ ಸುರತ್ಕಲ್ ರಸ್ತೆಯನ್ನು ಸರಿಪಡಿಸುವ ನೆಪದಲ್ಲಿ ಟ್ರಾಫಿಕ್ ಜಾಂಗೆ ಕಾರಣವಾಗಿ ವಾಹನ ಸಂಚಾರಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಎನ್ಎಚ್‌ಐಎ ಕೊನೆಗೂ ಎಚ್ಚೆತ್ತುಕೊಂಡಿದೆ. ಈ ಬಾರಿ ಸಾರ್ವಜನಿಕರಿಗೆ ಮೊದಲೇ ಮಾಹಿತಿ ನೀಡಿ ಹೆದ್ದಾರಿಗೆ ದುರಸ್ತಿ ಕಾಮಗಾರಿಗೆ ಇಳಿದಿದ್ದು, ಈ ಬಗ್ಗೆ ದಿನಾಂಕ ಪ್ರಕಟಿಸಿ ಪ್ರಕಟಣೆ ಹೊರಡಿಸಿದೆ.
ರಾ.ಹೆ 66 ರಲ್ಲಿ ಸುರತ್ಕಲ್ – ನಂತೂರು ನಡುವಿನ ಹೆದ್ದಾರಿ ದುರಸ್ತಿ ಕಾಮಗಾರಿ ಇಂದಿನಿಂದ(ಆ.7) ಆಗಸ್ಟ್ 13ರವರೆಗೆ ಕೈಗೆತ್ತಿಕೊಳ್ಳುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಹೆದ್ದಾರಿ ರಿಪೇರಿ ಸಂಬಂಧ ಗುಂಡಿಗಳನ್ನು ಮುಚ್ಚುವುದು, ತೇಪೆ ಕಾರ್ಯ ಚರಂಡಿ ಸ್ವಚ್ಛಗೊಳಿಸುವುದು ಮುಂತಾದ ಕೆಲಸ ನಡೆಯಲಿದೆ. ಈ ರಿಪೇರಿ ಕೆಲಸವು ವಾಹನಗಳ ದಟ್ಟಣೆ ಇಲ್ಲದ ಸಮಯ( ಪೀಕ್ ಅವರ್ಸ್ ಹೊರತುಪಡಿಸಿ) ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3:00 ರವರೆಗೆ ಹಾಗೂ ರಾತ್ರಿ ವೇಳೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮತ್ತು ತಾತ್ಕಾಲಿಕ ಮಾರ್ಗ ಬದಲಿಸುವ ಸಾಧ್ಯತೆ ಇದೆ. ಸಂಚಾರ ಸುಗಮ ನಿರ್ವಹಣೆಗೆ ಸಹಾಯವಾಗುವಂತೆ ಸ್ಥಳದಲ್ಲಿ ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಈ ವೇಳೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಎದುರಾಗುವ ಸಾಧ್ಯತೆ ಇದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಅಲ್ಲದೇ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಸೂಚನೆಗಳನ್ನು ಅನುಸರಿಸಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಎನ್ ಎಚ್ ಐ ಎ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛೀಮಾರಿ ಹಾಕಿಸಿಕೊಂಡಿದ್ದ ಎನ್ಎಚ್‌ಐಎ!
ಇತ್ತೀಚೆಗೆ ವಾಹನ ಸಂಚಾರ ಹೆಚ್ಚಿರುವ ಸಂದರ್ಭದಲ್ಲಿಯೇ ಕೂಳೂರು ಬ್ರಿಡ್ಜ್ ಪಕ್ಕ ಇಂಟರ್ ಲಾಕ್ ಅಳವಡಿಸುವುದಕ್ಕಾಗಿ ಹೆದ್ದಾರಿ ಬಂದ್ ಮಾಡಿದ್ದು ವಾಹನ ಸವಾರರು ಗಂಟೆಗಟ್ಟಲೆ ಬ್ಲಾಕ್ ನಲ್ಲಿ ಸಿಲುಕಿದ್ದರು. ಅಲ್ಲದೆ ಇತ್ತೀಚೆಗೆ ಮಟ ಮಟ ಮಧ್ಯಾಹ್ನವೇ ಹೆದ್ದಾರಿ ಬಂದ್ ಮಾಡಿ ರಸ್ತೆ ದುರಸ್ತಿ ಕಾಮಗಾರಿ ನಡೆಸಿದ್ದರಿಂದ ಇಡೀ ಹೆದ್ದಾರಿ ಬ್ಲಾಕ್ ಆಗಿತ್ತು. ಅಂಬ್ಯುಲೆನ್ಸ್‌ನಂತಹ ತುರ್ತು ವಾಹನಗಳೂ ಟ್ರಾಫಿಕ್‌ನಲ್ಲಿ ಸಿಲುಕಿ ರೋಗಿಗಳು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಬಗ್ಗೆ ಮಾಹಿತಿ ನೀಡಲು ಒಬ್ಬ ಟ್ರಾಫಿಕ್ ಪೊಲೀಸರನ್ನೂ ಸ್ಥಳದಲ್ಲಿ ನಿಯೋಜಿಸಲಾಗಿರಲಿಲ್ಲ. ಅಲ್ಲದೆ ಈ ಬಗ್ಗೆ ಮೊದಲೇ ಪ್ರಕಟಣೆಯನ್ನೂ ಹೊರಡಿಸಿರಲಿಲ್ಲ.
ಇಲಾಖೆಯ ನಿರ್ಲಕ್ಷ್ಯತನದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ ಸಾವರ್ಜನಿಕರಿಗೆ ಮೊದಲೇ ಮಾಹಿತಿ ನೀಡಿ, ವಾಹನ ದಟ್ಟಣೆ ಕಡಿಮೆ ಇರುವ ರಾತ್ರಿ ಸಮಯದಲ್ಲಿಯೇ ಹೆದ್ದಾರಿ ದುರಸ್ತಿ ಕಾಮಗಾರಿಗೆ ಇಳಿಯುವ ಮೂಲಕ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ.