ಮಂಗಳೂರು: ಬೆಂಗಳೂರಿನ ಬಸವ ಪರಿಷತ್ ನೀಡುವ ಬಸವ ಪುರಸ್ಕಾರ್ -2025 ಪ್ರಶಸ್ತಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಎಂಎನ್‌ಆರ್ ಅವರು ಸಹಕಾರ ಹಾಗೂ ಮಹಿಳಾ ಸಬಲೀಕರಣದಲ್ಲಿ ಮಾಡಿರುವ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಮೈಸೂರು ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಸಾನ್ನಿದ್ಯದಲ್ಲಿ ಆ 9ರಂದು ಬೆಂಗಳೂರಿನ ಭಾರತ ಸ್ಕೌಟ್ಸ್ ಮತ್ತು ಗೆ„ಡ್ಸ್ ಆವರಣದ ಕೊಂಡಜ್ಜಿ ಬಸವ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಹಕಾರ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ತಮ್ಮನ್ನು ತೊಡಗಿಸಿಕೊಂಡಿರುವ ರಾಜೇಂದ್ರ ಕುಮಾರ್ ಅವರು ರಾಜ್ಯದಲ್ಲಿ ಒಬ್ಬ ಸಮರ್ಥ ಸಹಕಾರಿ ನಾಯಕರಾಗಿ ಗುರುತಿಸಲ್ಪಟ್ಟವರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿದ್ದು, 31 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಮಾದರಿ ಬ್ಯಾಂಕ್ ಆಗಿ ರೂಪಿಸಿದ್ದಾರೆ. 110 ವರ್ಷಗಳ ಇತಿಹಾಸವನ್ನು ಹೊಂದಿರುವ ಎಸ್ ಸಿಡಿಸಿಸಿ ಬ್ಯಾಂಕ್ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನಗರ ಹಾಗೂ ಗ್ರಾಮೀಣ ಭಾಗದ 113 ಶಾಖೆಗಳ ಮೂಲಕ ನೀಡುತ್ತಿದೆ. ಸುಸಜ್ಜಿತ ವಾಹನದ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದೆ.
ಸಮಾಜ ಸೇವೆಯಲ್ಲೂ ಎಂಎನ್‌ಆರ್ ಅನನ್ಯ ಕೊಡುಗೆ ನೀಡಿದ್ದು, ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ್ದಾರೆ. ಮಹಿಳೆಯರಲ್ಲಿ ಆರ್ಥಿಕ ಚೆ„ತನ್ಯವನ್ನು ತುಂಬಲಾಗಿದೆ. ಇವರಿಗೆ ಹಲವಾರು ರಾಜ್ಯ , ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಾಯವಾಗಿವೆ.