ಮಂಗಳೂರು: ಪಾವಂಜೆ ಸೇತುವೆಯಿಂದ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ಮೂಲ್ಕಿ ಪೊಲೀಸರು ಸಕಾಲದಲ್ಲಿ ರಕ್ಷಿಸಿದ್ದಾರೆ. ಆ.4ರಂದು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಬರ್ಕೆ ಪೊಲೀಸ್ ಠಾಣೆ ಸರಹದ್ದಿಗೆ ಒಳಪಟ್ಟು ಪಿ.ವಿ.ಎಸ್ ಕಲಾಕುಂಜದ ಬಳಿಯ ಮಣ್ಣಗುಡ್ಡ ನಿವಾಸಿ ವಿಶ್ವನಾಥ ಶೆಟ್ಟಿ (75) ಪೊಲೀಸರಿಂದ ರಕ್ಷಿಸಲ್ಪಟ್ಟವರು.

ಇವರು ನಿನ್ನೆ ಬೆಳಿಗ್ಗೆ ಕುದ್ರೋಳಿ ದೇವಸ್ಥಾನಕ್ಕೆಂದು ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ನಿತಿನ್ ಎಂಬವರು ಬರ್ಕೆ ಪೊಲೀಸ್ ಠಾಣೆಗೆ ತಿಳಿಸಿದ್ದರು. ಆ ಕೂಡಲೇ ಈ ಮಾಹಿತಿಯನ್ನು
ಬರ್ಕೆ ಪೊಲೀಸ್ ಠಾಣೆಯ ಎಎಸ್ಐ ಸುಧಾಕರ್ ERSS-112 ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ERSS-112 ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗಳಾದ ಯೊಗೀಶ್, ಕಿಶೋರ್ ಕುಮಾರ್ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಮಧುಕರ್ ಈ ಮಾಹಿತಿಯನ್ನು ಸ್ವೀಕರಿಸಿ ಶೀಘ್ರ ಕಾರ್ಯೋನ್ಮುಖರಾಗಿದ್ದಾರೆ.
ಲಭಿಸಿದ ಮಾಹಿತಿಯ ಮೇರೆಗೆ ಪಾವಂಜೆ ಬ್ರಿಡ್ಜ್ ಬಳಿ ತೆರಳಿದಾಗ ವಿಶ್ವನಾಥ ಶೆಟ್ಟಿ ಪಾವಂಜೆ ಬ್ರಿಡ್ಜ್‌ನ ದಂಡೆಯ ಮೇಲೆ ನಿಂತು ನದಿಗೆ ಹಾರಲು ಪ್ರಯತ್ನಿಸುತ್ತಿದ್ದರು. ತಕ್ಷಣ ಪೊಲೀಸರು ವಿಶ್ವನಾಥರನ್ನು ಸಾರ್ವಜನಿಕರ ಸಹಾಯದೊಂದಿಗೆ ಸಕಲಾದಲ್ಲಿ ತಡೆದು ಅವರ ಜೀವರಕ್ಷಣೆ ಮಾಡಿದ್ದಾರೆ. ಚರ್ಮದ ಖಾಯಿಲೆಯಿಂದ ಬಳಲುತ್ತಿರುವ ವಿಚಾರದಿಂದ ಮನನೊಂದ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಇವರನ್ನು ಸಹೋದರಿ ವಾಣಿ ಶೆಟ್ಟಿ ಹಾಗೂ ಮಾಜಿ ಕಾರ್ಪೊರೇಟರ್ ಪ್ರಕಾಶ್ ಜೊತೆಗೆ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.