ಮಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಂದ ಜನರನ್ನು ದಿಕ್ಕುತಪ್ಪಿಸಲು ಎಸ್‌ಡಿಪಿಐ ಕಾರ್ಯಕರ್ತರ ಮನೆಗೆ ಎನ್ಐಎ ದಾಳಿ ನಡೆದಿದೆ. ನಮ್ಮ ಕಾರ್ಯಕರ್ತರನ್ನು ವಿಚಲಿತಗೊಳಿಬೇಕು, ವಿನಾ ಆರೋಪ ಹಾಕಿ ಜೈಲಿಗೆ ಹಾಕಬೇಕು ಎಂದು ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿ ನಮ್ಮನ್ನು ಹಿಂಸಿಸಿದರೆ ಬೀದಿ ಹೋರಾಟ, ಕಾನೂನು ಹೋರಾಟ ಅನಿವಾರ್ಯ ಎಂದು ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ್ಯ ಅಬ್ದುಲ್ ಜಲೀಲ್ ಕೆ. ಎಚ್ಚರಿಕೆ ನೀಡಿದರು.
ಸುಹಾಸ್ ಶೆಟ್ಟಿ ಹತ್ಯೆಯ ತನಿಖೆ ನಡೆಸುತ್ತಿರುವ ಎನ್‌ಐಎ ಇತ್ತೀಚೆಗೆ ಸುರತ್ಕಲ್, ಬಜ್ಪೆ ಭಾಗದಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಮನೆಗೆ ದಾಳಿ ನಡೆಸಿರುವುದನ್ನು ಖಂಡಿಸಿ, ಮಂಗಳೂರಿನ ಎಸ್‌ಡಿಪಿಐ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಡಳಿತ ವ್ಯವಸ್ಥೆಯನ್ನು ತನ್ನ ಸ್ವಂತಕ್ಕೆ ಬಳಸುತ್ತಿದ್ದು, ಸಿಬಿಐ, ಇ.ಡಿ. ಎನ್ಐಎ ತನಿಖಾ ಸಂಸ್ಥೆಯನ್ನು ತನ್ನ ದ್ವೇಷ ರಾಜಕಾರಣದ ಅಸ್ತ್ರವಾಗಿ ಬಳಸ್ತಾ ಇದೆ. ಸಂಘಪರಿವಾರದ ದ್ವೇಷ ರಾಜಕಾರಣದಿಂದಾಗಿ ನಮ್ಮ ಕಾರ್ಯಕರ್ತರನ್ನು ಅಕ್ರಮ ಬಂಧನ ಮಾಡಿದ್ದು, ಕೆಲವು ಪ್ರಕರಣಗಳಿಗೆ ನ್ಯಾಯಾಲಯಗಳೂ ಛೀಮಾರಿ ಹಾಕಿದ ಉದಾಹರಣೆಗಳಿವೆ, ಇದೀಗ ಸುಹಾಸ್ ಶೆಟ್ಟಿ ಹತ್ಯೆಯನ್ನು ಮುಂದಿಟ್ಟು ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ವಿನಾ ಕಾರಣ ಎನ್‌ಐಎ ದಾಳಿ ನಡೆದಿದೆ ಎಂದು ಅಬ್ದುಲ್ ಜಲೀಲ್ ಆರೋಪಿಸಿದರು.
ಎಪ್ರಿಲ್ , ಮೇ ತಿಂಗಳಲ್ಲಿ ಮೂರು ಕೋಮು ಪ್ರೇರಿತ ಕೊಲೆಗಳು ನಡೆದಿತ್ತು. ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ನಡೆದಾಗ ಸಂಘಪರಿವಾರ, ಬಿಜೆಪಿ ನಾಯಕರು ಸುಖಾ ಸುಮ್ಮನೆ ಎಸ್‌ಡಿಪಿಐ ನಾಯಕರನ್ನು ಎಳೆದು ತರುವುದು, ಯಾರ್ಯಾರದ್ದೋ ಹೆಸರು ಉಲ್ಲೇಖ ಮಾಡಿರುವ ಅವರ ಬಾಲಿಷತನ ಹೇಳಿಕೆ ಗಮನಿಸಿ ಎನ್ಐಎ ಎಸ್‌ಡಿಪಿಐ ಕಾರ್ಯರ್ತರ ಮೇಲೆ ದಾಳಿ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದರು. ಸುಹಾಸ್ ಹತ್ಯೆ ಖಂಡಿಸಿ ಸಂಘಪರಿವಾರದವರು ಬಜ್ಪೆ ಚಲೋ ಕಾರ್ಯಕ್ರಮ ಮಾಡಿದರೆ ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಬಜ್ಪೆಯಲ್ಲಿ ಅಶಾಂತಿ ಉಂಟಾಗಬಹುದು. ಹೀಗಾಗಿ ಈ ಕಾರ್ಯಕ್ರಮಕ್ಕೆ ಅವಕಾಶ ಕೊಡದೆ ಶಾಂತಿ ಕಾಪಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು. ವಿಪರ್ಯಾಸವೆಂದರೆ ನಮ್ಮ ಮೇಲೆಯೇ ಎನ್‌ಐಎ ದಾಳಿ ನಡೆಸಿದೆ, ಇವರಿಗೆ ಶಾಂತಿ ಬೇಕಿಲ್ಲ ಎಂದು ಜಲೀಲ್ ಆರೋಪಿಸಿದರು.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಸಂದರ್ಭ ಅದೇ ಊರಿನವ ಆಗಿದ್ದ ಶಾಪಿ ಬೆಳ್ಳಾರೆ , ಇಕ್ಬಾಲ್ ಅವರ ಮೊಬೈಲ್ ನೆಟ್ವರ್ಕ್ ಅದೇ ಊರಿನಲ್ಲಿ ಸಿಕ್ಕಿತು ಎಂಬ ಕ್ಷುಲಕ ಕಾರಣಕ್ಕೆ ಎನ್‌ಐಎ ಅವರನ್ನು ಬಂಧಿಸಿ ಜೈಲಲ್ಲಿಟ್ಟಿದೆ. ಪ್ರಕರಣದಲ್ಲಿ ಇವರ ಮೇಲೆ ಯಾವುದೇ ಸಾಕ್ಷಿ ಇಲ್ಲ. ಇದುವರೆಗೆ ಎಸ್‌ಡಿಪಿಐ ಮೇಲೆ ಯಾವುದೇ ಆರೋಪ ಸಾಬೀತಾಗಿಲ್ಲ. ದಾಳಿಯೇ ಮಾಡಿದ್ದು ಬೋಗಸ್ ಎಂದರು. ನಮ್ಮ ಜಿಲ್ಲೆಯ ಬಿಜೆಪಿ ಶಾಸಕರ, ಸಂಸದರ ಸಾಧನೆ ಶೂನ್ಯ. ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಹತ್ಯೆಯಾದ ಸಹೋದರ ಸಹೋದರರಿಯರ ಪರವಾಗಿ ಹೋರಾಟ ನಡೆಸಿರುವುದಕ್ಕೆ ನಮ್ಮನ್ನು ಸದೆ ಬಡಿಯುತ್ತಿದ್ದೀರಿ, ಇದಕ್ಕೆ ನಾವು ಕಾನೂನು ಪ್ರಕಾರವೇ ಉತ್ತರ ನೀಡುತ್ತೇವೆ ಎಂದರು.
ಕುಡುಪುವಲ್ಲಿ ಅಶ್ರಫ್ ವಯನಾಡ್ ಗುಂಪು ಹತ್ಯೆಗೆ ಸಂಬಂಧಿಸಿ 21 ಮಂದಿಯ ಬಂಧನ ಆಗಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯ ಬಂಧನ ಆಗಿಲ್ಲ, ಈ ಪ್ರಕರಣವನ್ನು ಅಲ್ಲಿನ ಠಾಣೆಯ ಸಿಬ್ಬಂದಿ ಮುಚ್ಚಿ ಹಾಕಿದ್ದಾರೆ. ಆದರೆ ಹಿರಿಯ ಅಧಿಕಾರಿಗಳ ಮೇಲೆ ಗೌರವ ಇದೆ. ಅದೇ ರೀತಿ ಅಬ್ದುಲ್ ರಹಿಮಾನ್ ಹತ್ಯೆಯ ಪ್ರಮುಖ ಆರೋಪಿ ಭರತ್ ಕುಮ್ಡೇಲ್‌ನ ಬಂಧನವೂ ಆಗಿಲ್ಲ. ಒಂದು ವೇಳೆ ಇವರು ಆರೋಪಿಗಳಲ್ಲದಿದ್ದರೆ ಮೊಬೈಲ್ ಯಾಕೆ ಸ್ವಿಚ್ ಆಫ್ ಮಾಡಿದ್ದಾರೆ? ರೌಡಿಶೀಟರ್ ಸುಹಾಸ್ ಶೆಟ್ಟಿಯ ಹತ್ಯೆಯನ್ನು ಎನ್‌ಐಎಗೆ ಕೊಡಲಾಗಿದ್ದು, ಹಾಗಾದರೆ ಅಮಾಯಕರಾದ ಅಶ್ರಫ್, ರಹಿಮಾನ್ ಜೀವಕ್ಕೆ ಬೆಲೆ ಇಲ್ವಾ? ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಾ? ಹಾಗಾಗಿ ಈ ಪ್ರಕರಣವನ್ನೂ ಎಸ್‌ಐಟಿಗೆ ಕೊಡುವಂತೆ ಜಲೀಲ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಹರ್ಷದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಮಾಲ್, ಅಶ್ರಫ್ ಅಡ್ಡೂರು ಉಪಸ್ಥಿತರಿದ್ದರು.