ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯೋಜನೆಗಳಲ್ಲಿ ಒಂದಾದ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯು ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಯಕ್ಷಗಾನ ಕಲೆಯನ್ನು ಶೈಕ್ಷಣಿಕ ಆಯಾಮದೊಂದಿಗೆ ಪರಿಚಯಿಸಬೇಕೆಂದುಕೊಂಡು 2023ರಲ್ಲಿ ಕಾರ್ಯರೂಪಕ್ಕೆ ಬಂದ ಈ ಯೋಜನೆಯು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ಮುಂದುವರಿಯುತ್ತಿದೆ. ಆರಂಭದಲ್ಲಿ ದ.ಕ ಜಿಲ್ಲೆಯ ಒಟ್ಟು 38 ಶಾಲೆಗಳಲ್ಲಿ ಪ್ರಾರಂಭವಾದ ಈ ಯೋಜನೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು ನಾಲ್ಕು ಜಿಲ್ಲೆಯ 87 ಶಾಲೆಗಳು ಒಳಪಟ್ಟಿದ್ದವು. ಈ ಬಾರಿ ದ.ಕ ಜಿಲ್ಲೆಯಲ್ಲಿ 58, ಉಡುಪಿಯಲ್ಲಿ 14, ಶಿವಮೊಗ್ಗದಲ್ಲಿ 16 , ಚಿಕ್ಕಮಗಳೂರು ಜಿಲ್ಲೆಯಲ್ಲಿ 2 , ಒಟ್ಟು 90 ಶಾಲೆಗಳಲ್ಲಿ ಈ ಯೋಜನೆಯಡಿ ಸುಮಾರು 6000 ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಯಕ್ಷ ದ್ರುವ ಯಕ್ಷ ಶಿಕ್ಷಣ ನಿರ್ದೇಶಕರು , ಯಕ್ಷ ದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು .
ನಗರದ ಪತ್ರಿಕಾಭವನದಲ್ಲಿ ಮಾತನಾಡಿ ಅವರು , ಶಾಲಾ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಶಾಲಾ ಅವಧಿಯಲ್ಲಿ ನಡೆಯುವ ಈ ಯಕ್ಷಗಾನ ತರಗತಿಯು 6 ನೇ ತರಗತಿಯಿಂದ 10 ನೇ ತರಗತಿಯೊಳಗಿನ ವಿದ್ಯಾರ್ಥಿಗಳಿಗೆ ಮೀಸಲಾದ ಯೋಜನೆಯಾಗಿದೆ. ಶಾಲಾ ಮಕ್ಕಳಿಗೆ ಯಕ್ಷಗಾನ ಕಲೆಯ ಜೊತೆಗೆ ಸಂಸ್ಕೃತಿ, ಜೀವನ ಮೌಲ್ಯ, ಕನ್ನಡ ಭಾಷಾ ಶುದ್ಧತೆ ಮತ್ತು ಆತ್ಮಸ್ಥೈರ್ಯದ ಉದ್ದೀಪನಕ್ಕೆ ಅವಕಾಶ ನೀಡಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 49 ಶಿಕ್ಷಕರು ಯಕ್ಷಗಾನ ತರಗತಿ ಮಾಡುವಲ್ಲಿ ಸೇವಾನಿರತರಾಗಿದ್ದು ಒಟ್ಟು 90 ಶಾಲೆಗಳಲ್ಲಿ ಬಡಗುತಿಟ್ಟಿನ ತರಗತಿ 19 ಶಾಲೆಗಳಲ್ಲಿ ಹಾಗೂ ತೆಂಕುತಿಟ್ಟಿನ ತರಗತಿ 71 ಶಾಲೆಗಳಲ್ಲಿ ನಡೆಯುತ್ತಿದೆ. ಈ ತರಗತಿಗಳು ಜೂನ್ ತಿಂಗಳಿನಿಂದ ಡಿಸೆಂಬರ್ ತಿಂಗಳಾಂತ್ಯದವರೆಗೆ ನಡೆಯಲಿದ್ದು ಒಂದು ಶೈಕ್ಷಣಿಕ ವರ್ಷದಲ್ಲಿ ವಾರಕ್ಕೆ ಒಂದು ಗಂಟೆಯ ಎರಡು ತರಗತಿಯಂತೆ ಕನಿಷ್ಠ 34, ಗರಿಷ್ಠ 64 ತರಗತಿಗಳನ್ನು ಮಾಡುವುದಾಗಿದೆ.
ಸುದ್ದಿಗಾರೊಂದಿಗೆ ಮಾತನಾಡಿದ ಯಸಖ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸು ಐತಾಳ , ಈ ಯೋಜನೆಯ ಸುಗಮ ಸಾಧ್ಯತೆಗಾಗಿ ಪಟ್ಲ ಫೌಂಡೇಶನ್ ನ ಪ್ರಾದೇಶಿಕ ಘಟಕಗಳು ಸಹಕಾರವನ್ನು ನೀಡುತ್ತಿದ್ದು ಶಾಲೆಯ ಯಕ್ಷಗಾನ ತರಗತಿಯ ಚಟುವಟಿಕೆಯನ್ನು ಪರಿಶೀಲಿಸುವತ್ತ ಪ್ರಾದೇಶಿಕ ಘಟಕಗಳು ಸಹಕಾರ ನೀಡಿವೆ. ಯಕ್ಷಗಾನ ನಾಟ್ಯ ಕಲಿತ ವಿದ್ಯಾರ್ಥಿಗಳಿಗೆ ವೇದಿಕೆ ಅವಕಾಶ ಕಲ್ಪಿಸಲು ಶಾಲಾ ಮಟ್ಟದಲ್ಲಿ ವ್ಯವಸ್ಥೆ ಮಾಡುವ ಜೊತೆಗೆ ಪ್ರಾದೇಶಿಕ ಘಟಕ ವ್ಯಾಪ್ತಿಯ ಕೇಂದ್ರಸ್ಥಾನದಲ್ಲಿ “ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ” ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ ಯಕ್ಷಗಾನ ಅಭ್ಯಾಸ ನಿರತ ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಅಂಕವನ್ನು ಪಡೆದರೆ ಅಂತಹ ವಿದ್ಯಾರ್ಥಿಗಳನ್ನು ಗುರುತಿಸುವ ಯೋಜನೆಯನ್ನು ಟ್ರಸ್ಟ್ ಹಾಕಿಕೊಂಡಿದೆ. ಸರಕಾರಿ ಪ್ರೌಢಶಾಲೆ ಮುಲ್ಲಕಾಡು ಇಲ್ಲಿನ ಮೂಲತಃ ಉತ್ತರ ಕರ್ನಾಟಕದ ವಿದ್ಯಾರ್ಥಿನಿ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ ಯಕ್ಷಗಾನ ಶಿಕ್ಷಣ ಪಡೆದು ಉತ್ತಮ ವೇಷಗಳನ್ನು ಮಾಡಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ SSLC ಪರೀಕ್ಷೆಯಲ್ಲಿ 603 ಅಂಕವನ್ನು ಗಳಿಸಿ ಶಾಲೆಗೂ ಯಕ್ಷಧ್ರುವ ಯಕ್ಷಶಿಕ್ಷಣಕ್ಕೂ ಗೌರವವನ್ನು ತಂದಿರುವುದು ಗಮನಾರ್ಹ ಸಂಗತಿಯಾಗಿದೆ. ಇನ್ನು ಮುಂದಕ್ಕೆ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ ಕನಿಷ್ಠ ಮೂರು ವರ್ಷ ಯಕ್ಷಗಾನ ಶಿಕ್ಷಣ ಪಡೆದು ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಉತ್ತಮ ಪ್ರೋತ್ಸಾಹ ಧನದೊಂದಿಗೆ ಗೌರವಿಸುವುದಾಗಿ ಪಟ್ಲ ಫೌಂಡೇಶನ್ ನಿರ್ಧರಿಸಿದೆ. ಈ ಯೋಜನೆ ವಿದ್ಯಾರ್ಥಿಗಳ ಕಲಿಕೆ ಮತ್ತು ಕಲಾ ನೈಪುಣ್ಯತೆಯ ಉದ್ದೀಪನಕ್ಕೆ ಸಹಕಾರ ನೀಡಲಿದೆ ಎಂದು ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿಯಾದ ಸಿಎ ಸುದೇಶ್ ಕುಮಾರ್ ರೈ , ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ , ಪ್ರದೀಪ್ ಆಳ್ವ ಉಪಸ್ಥಿತತರಿದ್ದರು .
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19