ಮಂಗಳೂರು: ಧರ್ಮಸ್ಥಳದ ಕಾಡಿನಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಉತ್ಪನನದ ವೇಳೆ 6 ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರದ ಮೂಳೆಗಳು ಸಹಿತ ಹಲವು ವಸ್ತುಗಳು ಸಿಕ್ಕಿದೆ ಎಂದು ವರದಿಯಾದ ಬೆನ್ನಲ್ಲೇ ಹೆಚ್ಚಿನ ತನಿಖೆಗಾಗಿ ಶ್ವಾನ ದಳ ಆಗಮಿಸಿರುವು ತೀವ್ರ ಕುತೂಹಲ ಮೂಡಿಸಿದೆ. ಅಸ್ತಿಪಂಜರ ಸಿಕ್ಕ ಜಾಗಕ್ಕೆ ಲ್ಯಾಟ್‌ಪಾಟ್, ಹಗ್ಗ, ಪ್ರಿಂಟರ್ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ಅನಾಮಿಕ ವ್ಯಕ್ತಿ ಹೇಳಿದ ಜಾಗದಲ್ಲೇ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿದ್ದು, ಎಸ್‌ಐಟಿ ತನಿಖೆಗೆ ಮಹ್ವತದ ಸುಳಿವು ಸಿಕ್ಕಂತಾಗಿದೆ. ಶ್ವಾನ ದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದು, ಇದರ ಉದ್ದೇಶವೇನು ಎನ್ನುವುದು ಎಸ್‌ಐಟಿ ನಡೆ ಕುತೂಹಲ ಮೂಡಿಸಿದೆ. ಇದರ ಜೊತೆಗೆ ಅರಣ್ಯ ಮತ್ತು ಕಂದಾಯ ಇಲಾಖೆ ಕೂಡ ಆರನೇ ಜಾಗದಲ್ಲಿ ನಕ್ಷೆ ಪರಿಶೀಲನೆ ನಡೆಸಿದೆ. ಉತ್ಖನನ ನಡೆಸುವ ಸ್ಥಳದಲ್ಲಿ ನೇತ್ರಾವತಿ ನದಿ ನೀರಿನ ಒರತೆ ಇದ್ದ ಕಾರಣ ಪಂಪ್ ಸೆಟ್ ತರಿಸಿ ನೀರು ಖಾಲಿ ನಡೆಸಿ ಅಧಿಕಾರಿಗಳು ಉತ್ಖನನ ನಡೆಸಿದ್ದಾರೆ.
ಲಕ್ಷ್ಮೀ ಯಾರು?
ಎರಡನೇ ದಿನದ ಕಾರ್ಯಾಚರಣೆ ವೇಳೆ ಕೆಂಪು ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿತ್ತು. ಪತ್ತೆಯಾದ ಎಟಿಎಂ ಕಾರ್ಡ್‌ಗಳಲ್ಲಿ ಒಂದರಲ್ಲಿ ಪುರುಷನ ಹೆಸರು, ಇನ್ನೊಂದರಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಹೆಸರು ಇರುವುದು ಭಾರೀ ಕುತೂಹಲ ಮೂಡಿಸಿದೆ.
ಮಿಕ್ಕಂತೆ ಇನ್ನೂ ಅನಾಮಿಕ ಗುರುತಿಸಿರುವ 7 ಪಾಯಿಂಟ್‌ಗಳನ್ನು ಅಗೆಯಲು ಬಾಕಿ ಇದೆ. 9 ಪಾಯಿಂಟ್ ನಂತರ ಖಂಡಿತ ಮೂಳೆಗಳು ಸಿಗಲಿದೆ ಎಂದು ಅನಾಮಿಕ ಹೇಳಿರುವುದು ವರದಿಯಾಗಿತ್ತು. ಇನ್ನು ಆರನೇ ಪಾಯಿಂಟ್ ಬಳಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರವನ್ನು ಪೊಲೀಸರು ಸುರಕ್ಷಿತವಾಗಿ ಸಂಗ್ರಹಿಸಿದ್ದಾರೆ. ಎಸಿಪಿ ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಯಿತು ಎಂದು ತಿಳಿದುಬಂದಿದೆ.
ಪತ್ತೆದಾರಿ ಕಾದಂಬರಿಗಿಂತಲೂ ದಿನದಿಂದ ದಿನಕ್ಕೆ ರೋಚಕ ತಿರುವನ್ನು ಪಡೆಯುತ್ತಾ ಸಾಗುವ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಸಿಕ್ಕಿರುವ ಎಲ್ಲಾ ವಸ್ತುಗಳ ಎಫ್‌ಎಸ್‌ಎಲ್ ತನಿಖೆ ನಡೆಸಿ, ಎಲ್ಲಾ ವಿಧಿವಿಧಾನಗಳು ಮುಗಿದ ಬಳಿಕ ಪ್ರಕರಣ ಎಲ್ಲಿಗೆ ಮುಟ್ಟಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.