ಬೆಂಗಳೂರು: ಇಡೀ ವಿಶ್ವದಲ್ಲಿ ಈ ಮೊದಲು ಎಲ್ಲೂ ಗುರುತಿಸಲಾಗದ ಹೊಸ ರಕ್ತದ ಗುಂಪು ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಅಂದಹಾಗೆ ಈ ರಕ್ತದ ಗುಂಪಿಗೆ ‘ಸಿಆರ್‌ಐಬಿ’ ಎಂದು ಹೆಸರಿಸಲಾಗಿದೆ.
ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಪ್ರಯತ್ನದಿಂದಾಗಿ ಈ ಹೊಸ ಗುಂಪನ್ನು ಗುರುತಿಸಲಾಗಿದೆ. ಯುಕೆ ಬ್ರಿಸ್ಟಲ್‌ನಲ್ಲಿರುವ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯ (ಐಬಿಜಿಆರ್‌ಎಲ್) ರಕ್ತಕಣಗಳನ್ನು 10 ತಿಂಗಳ ಕಾಲ ವ್ಯಾಪಕ ಸಂಶೋಧನೆಗೆ ಒಳಪಡಿಸಿದ ಬಳಿಕ ಈ ಗುಂಪನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ ಈ ಹೊಸ ಪ್ರತಿಜನಕವು ಕ್ರೋಮರ್ (ಸಿಆರ್) ರಕ್ತದ ಗುಂಪು ವ್ಯವಸ್ಥೆಯ ಭಾಗವಾಗಿರುವುದು ತಿಳಿದುಬಂದಿದೆ.
ಇದರ ಮೂಲವನ್ನು ಗುರುತಿಸಿ ಈ ರಕ್ತದ ಗುಂಪಿಗೆ ಅಧಿಕೃತವಾಗಿ ‘CRIB’ ಎಂದು ಹೆಸರಿಡಲಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ 38 ವರ್ಷದ ಕೋಲಾರದ ಮಹಿಳೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದರು. ಅವರ ರಕ್ತದ ಗುಂಪು ‘ಒ ಆರ್‌ಎಚ್+’ ಪಾಸಿಟಿವ್ ಎಂದು ಬರೆದುಕೊಳ್ಳಲಾಗಿತ್ತು. ಶಸ್ತ್ರಚಿಕಿತ್ಸೆಗೆ ಮುನ್ನ ಅವರ ರಕ್ತ ಆಸ್ಪತ್ರೆಯಲ್ಲಿ ಲಭ್ಯವಿದ್ದ ‘ಒ+’ ಗುಂಪಿನ ರಕ್ತಕ್ಕೆ ಹೊಂದಾಣಿಕೆ ಆಗಿರಲಿಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆಗಾಗಿ ಮಹಿಳೆಯ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆರೆನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಡಾ. ಮಾಥುರ್ ಹೇಳಿದ್ದೇನು?
“ಸುಧಾರಿತ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿಕೊಂಡು, ನಮ್ಮ ತಂಡವು ಅವರ ರಕ್ತವು ‘ಪ್ಯಾನ್ರಿಯಾಕ್ಟಿವ್’ ಆಗಿರುವುದನ್ನು ಗುರುತಿಸಿತು. ಇದು ಎಲ್ಲಾ ಪರೀಕ್ಷಾ ಮಾದರಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ನಮ್ಮ ತಂಡ ಕಂಡುಹಿಡಿದಿದೆ. ಇದು ಅಪರೂಪದ ಅಥವಾ ತಿಳಿದಿಲ್ಲದ ರಕ್ತದ ಪ್ರಕಾರದ ಸಂಭವನೀಯ ಪ್ರಕರಣವೆಂದು ಗುರುತಿಸಿ, ತಂಡವು ರಕ್ತದ ಗುಂಪನ್ನು ಹೊಂದಾಣಿಕೆ ಮಾಡಲು ಅವರ ಕುಟುಂಬದ 20 ಸದಸ್ಯರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿತು, ಆದರೆ ಅವುಗಳಲ್ಲಿ ಯಾವುದೂ ಹೊಂದಿಕೆಯಾಗಲಿಲ್ಲ. ಪ್ರಕರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ಅವರ ವೈದ್ಯರು ಮತ್ತು ಕುಟುಂಬದ ಸಹಯೋಗದ ಪ್ರಯತ್ನದಿಂದ, ರಕ್ತ ವರ್ಗಾವಣೆಯ ಅಗತ್ಯವಿಲ್ಲದೆ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು, ಎಂದು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಡಾ. ಅಂಕಿತ್ ಮಾಥುರ್ ಹೇಳಿದರು.
ಏತನ್ಮಧ್ಯೆ, ಅವರ ಮತ್ತು ಅವರ ಕುಟುಂಬದ ರಕ್ತದ ಮಾದರಿಗಳನ್ನು ಯುಕೆಯ ಬ್ರಿಸ್ಟಲ್‌ನಲ್ಲಿರುವ ಅಂತರರಾಷ್ಟ್ರೀಯ ರಕ್ತ ಗುಂಪು ಉಲ್ಲೇಖ ಪ್ರಯೋಗಾಲಯಕ್ಕೆ (ಐಬಿಜಿಆರ್‌ಎಲ್) ಕಳುಹಿಸಲಾಗಿದೆ. ಹತ್ತು ತಿಂಗಳ ವ್ಯಾಪಕ ಸಂಶೋಧನೆ ಮತ್ತು ಆಣ್ವಿಕ ಪರೀಕ್ಷೆಯು ಹಿಂದೆ ತಿಳಿದಿಲ್ಲದ ರಕ್ತ ಗುಂಪು ಪ್ರತಿಜನಕವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಡಾ. ಮಾಥುರ್ ಹೇಳಿದರು.