ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ತಲೆಬುರುಡೆ ರಹಸ್ಯ ದಿನದಿಂದ ದಿನಕ್ಕೆ ಪತ್ತೆದಾರಿ ಕಾದಂಬರಿಯಂತೆ ವಿಶೇಷ ತಿರುವನ್ನು ಪಡೆಯುತ್ತಾ ಸಾಗುತ್ತಿದೆ. ಎಸ್‌ಐಟಿ ತಂಡದ ಗುಂಡಿ ಅಗೆಯುವ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಅನಾಮಧೇಯ ಗುರುತಿಸಿದ ಎರಡನೇ ಗುಂಡಿ ಅಗೆಯುವ ಕಾರ್ಯಾಚರಣೆ ಆರಂಭಗೊಂಡಿದೆ. ಮೊದಲ ಗುಂಡಿಯಲ್ಲಿ ಯಾವುದೇ ಕುರುಹುಗಳು ಸಿಕ್ಕಿಲ್ಲ ಎನ್ನಲಾಗಿದ್ದರೂ, ಇದನ್ನು ಮತ್ತೆ ಕೆದಕಲಾಗುತ್ತದೆಯೇ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಲಭಿಸಬೇಕಿದೆ.
ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಇಂದು 11 ಗಂಟೆಯ ಸುಮಾರಿಗೆ ಅನಾಮಧೇಯ ಮುಸುಕುದಾರಿ ವ್ಯಕ್ತಿ ಜೊತೆ ಎಸ್.ಐ.ಟಿ ತಂಡ ನೇತ್ರಾವತಿ ಸ್ನಾನಘಟ್ಟಕ್ಕೆ ಆಗಮಿಸಿ ಅಗೆಯುವ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.
ಎಸ್‌ಐಟಿ ತಂಡದ ಐಪಿಎಸ್ ಅನುಚೇತ್, ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್, ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರು ಕೆ.ಎಮ್.ಸಿ ವೈದ್ಯರ ತಂಡ, ಎಫ್ಎಸ್ಎಲ್ ತಂಡ, ಐ.ಎಸ್.ಡಿ ಹಾಗೂ ಇತರ ಅಧಿಕಾರಿಗಳ ತಂಡ ಸ್ನಾನಘಟ್ಟದತ್ತ ಬೀಡುಬಿಟ್ಟಿದೆ.
ಇಂದು ಗುಂಡಿ ಅಗೆಯಲಿರುವ ಜಾಗ ಅರಣ್ಯ ಇಲಾಖೆಗೆ ಸೇರಿರುವುದರಿಂದ ಇಲ್ಲಿ ಹಿಟಾಚಿ ಬಳಕೆಗೆ ಅನುಮತಿ ಇಲ್ಲ. ಹೀಗಾಗಿ ಕಾರ್ಮಿಕರನ್ನೇ ಬಳಸಿ ಗುಂಡಿ ತೋಡಿ ಕಳೇಬರ ಹುಡುಕುವ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.