ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಶಾಸಕ ಮಂಜುನಾಥ ಭಂಡಾರಿ ಮನವಿ!

ಮಂಗಳೂರು: ರೈಲುಗಳ ಸಂಖ್ಯೆ ಹೆಚ್ಚಾದರೂ ರೈಲು ನಿಲ್ದಾಣಗಳು ಮೇಲ್ದರ್ಜೆಗೇರಿದರೂ ರೈಲ್ವೇ ಪೊಲೀಸ್ ಮಾತ್ರ ತುಂಬಾ ಹಳೆಯ ವ್ಯವಸ್ಥೆಯನ್ನೇ ಹೊಂದಿದೆ. ಮಂಗಳೂರು ಕೇಂದ್ರ ರೈಲು ನಿಲ್ದಾಣದ ಬಳಿ ಠಾಣೆಯನ್ನು ಹೊಂದಿರುವ ಮಂಗಳೂರು ರೈಲ್ವೇ ಪೊಲೀಸ್ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಹಲವು ವರ್ಷಗಳಿಂದ ಇದ್ದು ಕೂಡಲೇ ಸಿಬ್ಬಂದಿಯ ನೇಮಕಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ.
ಮಂಗಳೂರು ರೈಲ್ವೇ ಪೊಲೀಸ್ ತಲಪಾಡಿ, ತೊಕ್ಕೊಟ್ಟು ಜಂಕ್ಷನ್, ತೋಕೂರು, ಬಂಟ್ವಾಳದಿಂದ ಸುಬ್ರಹ್ಮಣ್ಯದವರೆಗೆ 129 ಕಿ.ಮೀಗೂ ಅಧಿಕ ವ್ಯಾಪ್ತಿಯಲ್ಲಿ 18 ರೈಲು ನಿಲ್ದಾಣಗಳ ವ್ಯಾಪ್ತಿಯನ್ನು ಹೊಂದಿದೆ. ದಿನಕ್ಕೆ ಹತ್ತಾರು ರೈಲುಗಳಲ್ಲಿ ತಪಾಸಣೆ ನಡೆಸಬೇಕಿದೆ.
ಕನಿಷ್ಠ 30 ಮಂದಿ ಇರಬೇಕಾದ ಠಾಣೆಯಲ್ಲಿ ತಲಾ ಓರ್ವರು ಇನ್ಸ್‌ಪೆಕ್ಟರ್, ಪಿಎಸ್‌ಐ, ಎಎಸ್‌ಐ, ಮೂವರು ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು 9 ಮಂದಿ ಕಾನ್‌ ಸ್ಟೆಬಲ್‌ಗಳು ಸೇರಿದಂತೆ ಒಟ್ಟು 18 ಮಂದಿ ಪೊಲೀಸರು ಇದ್ದು ಇದರಲ್ಲಿ ನಾಲ್ವರು ಮಹಿಳಾ ಪಿಸಿಗಳು, ವಾಸ್ತವವಾಗಿ ಮಂಗಳೂರಿನಲ್ಲಿ ಅಧಿಕಾರಿ, ಸಿಬಂದಿ ಸೇರಿ 14 ಮಂದಿ ಮಾತ್ರ ಇದ್ದಾರೆ.
ಕೆಲಸದ ಒತ್ತಡದಿಂದಾಗಿ ಇರುವ ಸಿಬ್ಬಂದಿಗಳಿಗೆ ನಿರಂತರ ಕರ್ತವ್ಯದಿಂದಾಗಿ ವಿಶ್ರಾಂತಿ ಇಲ್ಲದಂತಾಗಿದೆ. ಅಗತ್ಯ ಬಿದ್ದಾಗ ರಜೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಅತ್ತ ರೈಲ್ವೇ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವುದು. ಇತ್ತ ಸಿಬಂದಿಯ ರಜೆ, ವಿಶ್ರಾಂತಿ ಮೊದಲಾದ ಅಗತ್ಯ ಬೇಡಿಕೆ ಈಡೇರಿಸುವ ಅಡಕತ್ತರಿಯಲ್ಲಿ ಅಧಿಕಾರಿಗಳು ಸಿಲುಕಿದ್ದಾರೆ. ಮಂಗಳೂರಿನಲ್ಲಿ 1992ರಲ್ಲಿ ರೈಲ್ವೇ ಪೊಲೀಸ್ ಠಾಣೆ ಆರಂಭಗೊಂಡರೂ ಮೇಲ್ದರ್ಜೆಗೇರಿಲ್ಲ ಮುಖ್ಯವಾಗಿ ಸಿಬಂದಿ ಕೊರತೆ ಎದುರಿಸುತ್ತಿದ್ದು ಉಡುಪಿ ಕೊಂಕಣ ರೈಲ್ವೇ ಮಾರ್ಗದಲ್ಲಿ ರೈಲ್ವೇ ಪೊಲೀಸ್ ಇಲ್ಲದಿರುವುದರಿಂದ ಅಲ್ಲಿಯೂ ಮಂಗಳೂರಿನ ಪೊಲೀಸರೇ ನಿಗಾ ವಹಿಸಬೇಕಿದೆ.
ಆದ್ದರಿಂದ ಮಂಗಳೂರಿನ ರೈಲ್ವೇ ಪೊಲೀಸ್ (ಜಿಆರ್‌ಪಿ) ಠಾಣೆಯಲ್ಲಿ ಪೋಲಿಸ್ ಸಿಬ್ಬಂದಿಗಳ ಕೊರತೆಯನ್ನು ನೀಗಿಸುವ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಗೃಹ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಪತ್ರ ಮೂಲಕ ಭಂಡಾರಿ ಅವರು ಮನವಿ ಮಾಡಿದ್ದಾರೆ.

error: Content is protected !!