ಬೆಂಗಳೂರು: ದುಬೈನಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಹರ್ಷವರ್ಧಿನಿ ರನ್ಯಾ ರಾವ್ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಪೋಸಾ) ಅಡಿ ಕಂದಾಯ ಗುಪ್ತಚರ ನಿರ್ದೇಶನಾಲಯ ಹೊರಡಿಸಿರುವ ಆದೇಶವನ್ನು ಸಲಹಾ ಮಂಡಳಿಯು ಖಾತರಿಪಡಿಸಿದೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.
ಕಾಫಿಪೋಸಾ ಕಾಯ್ದೆ ಅಡಿ ರನ್ಯಾ ಬಂಧನ ಪ್ರಶ್ನಿಸಿ ಆಕೆಯ ಮಲತಾಯಿ ಎಚ್.ಪಿ. ರೋಹಿಣಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಪಿ ಮನ್ಮಧ ರಾವ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ, ಅರ್ಜಿದಾರರ ಪರ ವಕೀಲರು, ಹೈಕೋರ್ಟ್ನ ಸಲಹಾ ಮಂಡಳಿಯು ಕಾಫಿಪೋಸಾ ಅಡಿ ರನ್ಯಾ ವಶಕ್ಕೆ ಪಡೆದಿರುವುದನ್ನು ಖಾತರಿಪಡಿಸಿದೆ. ಹೀಗಾಗಿ, ಮೆರಿಟ್ ಮೇಲೆ ಅರ್ಜಿ ವಿಚಾರಣೆ ನಡೆಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರ( ಡಿಆರ್ಐ) ಪರ ವಕೀಲರು, ಅರ್ಜಿದಾರರು ಈಗಷ್ಟೇ ಅರ್ಜಿಗೆ ಸಂಬಂಧಿಸಿದ ಮೆಮೊ ನೀಡಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಬೇಕಾಗಿದ್ದು, ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ಪೀಠ, ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿತು. ಕಾಫಿಪೋಸಾ ಅಡಿಯಲ್ಲಿ ಬಂಧನ ಆದೇಶ ಹೊರಡಿಸಿರುವುದರಿಂದ ರನ್ಯಾ ರಾವ್ ಸದ್ಯಕ್ಕೆ ಬಿಡುಗಡೆ ಭಾಗ್ಯ ಲಭ್ಯವಾಗಿರಲಿಲ್ಲ.