ಮಂಗಳೂರು: ಶ್ರೀಮಂತರನ್ನೇ ಟಾರ್ಗೆಟ್ ಮಾಡಿ, ಅವರನ್ನು ಮಾತಿನಲ್ಲೇ ಮರಳು ಮಾಡಿ, ಕೋಟಿ ಕೋಟಿ ಸಾಲ ನೀಡುವುದಾಗಿ ನಂಬಿಸಿ ಕೋಟಿಯಲ್ಲಿಯೇ ಕಮೀಷನ್ ಪೀಕಿಸಿ ಪರಾರಿಯಾಗಿ ಟೋಪಿ ಹಾಕುತ್ತಿದ್ದ ಖದೀಮ ನಗರದ ಜಪ್ಪಿನಮೊಗರು ಬಳಿಯ ಅರಮನೆಯಂತಹಾ ಮನೆಯ ಅಡಗುತಾಣದಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ರಹಸ್ಯವನ್ನು ಮಂಗಳೂರು ಪೊಲೀಸರು ಬಯಲು ಮಾಡಿದ್ದಾರೆ.
ಜಪ್ಪಿನಮೊಗರು ತಂದೊಳಿಗೆ ನಿವಾಸಿ ರೋಷನ್ ಸಲ್ದಾನ್ಹಾ (45) ಪ್ರಕರಣದ ಆರೋಪಿಯಾಗಿದ್ದಾನೆ. ಕೋಟಿ ಕೋಟಿ ವಂಚನೆ ಮಾಡುತ್ತಿದ್ದ ಆರೋಪಿ ತನ್ನ ಮನೆಯಲ್ಲಿಯೇ ಇನ್ನೊಂದು ರಹಸ್ಯ ಕೋಣೆಗಳನ್ನು ಮಾಡಿ, ಅದರಲ್ಲಿಯೇ ಅಡಗಿಕೊಳ್ಳುತ್ತಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ತನ್ನ ಮನೆಯನ್ನೇ ಹೈಫೈ ಬಾರ್ ಅಂಡ್ ರೆಸ್ಟೋರೆಂಟ್ ರೀತಿ ಮಾಡಿಕೊಂಡಿದ್ದ. ಮನೆಯ ಒಳಗೆಲ್ಲ ವಿದೇಶಿ ಬ್ರಾಂಡಿನ ಬಾಟಲಿಗಳಿದ್ದು ಬಂಗಾರದ ಬಣ್ಣದ ಮೂರ್ತಿಗಳು, ಆಕರ್ಷಕ ಚಿತ್ತಾರಗಳಿರುವ ಪ್ರತಿಮೆಗಳು, ಬೆಲೆಬಾಳುವ ಅಕ್ವೇರಿಯಂ ಪತ್ತೆಯಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಈತನ ವಿರುದ್ಧ 2 ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ ಅವರು ಆರೋಪಿಯ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಹಿಂದೆಯೂ ಪೊಲೀಸರು ಇವನ ಬೆನ್ನುಬಿದ್ದಾಗ ಒಳಗಿರುವ ಸಿಸಿ ಟಿವಿಯಲ್ಲೇ ಗಮನಿಸಿ ತಪ್ಪಿಸಿಕೊಳ್ಳುತ್ತಿದ್ದ.
ಮನೆಯ ಹೊರಗಡೆ ರಿಮೋಟ್ ಆಧರಿತ ದೊಡ್ಡ ಗೇಟ್ ಅಳವಡಿಸಿದ್ದು ಯಾರಿಗೂ ಒಳಗಡೆ ಬರಲಾಗದಂತೆ ಮಾಡಿಕೊಂಡಿದ್ದ. ಯಾರಾದರೂ ಕಂಪೌಂಡ್ ಹಾರಿ ಬರಬಹುದು ಎನ್ನುವ ಭಯದಿಂದ ಗೇಟ್‌ಗೆ ಗ್ರೀಸ್ ಹಚ್ಚಿ ಜಾರುವಂತೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ನಿನ್ನೆ 8 ಗಂಟೆಗೆ ಬೇಟೆಗೆ ತೆರಳಿದ್ದ ಪೊಲೀಸರು ಸಲ್ದಾನನ ಗೇಟ್ ಮುಂದೆ ನಿಂತರು, ಬಾಗಿಲು ತೆರೆಯದ ಕಾರಣ ಹತ್ತಡಿ ಎತ್ತರದ ಗೇಟ್ ಒಳಗೆ ಹಾರಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಮಲೇಷಿಯನ್ ಹುಡುಗಿ ಜೊತೆ ಬೀಯರ್ ಹೀರುತ್ತಿದ್ದ ಸಲ್ದಾನನಿಗೆ ಪೊಲೀಸರು ಬಂದಿರುವುದು ಗಮನಕ್ಕೆ ಬಂದಿರಲಿಲ್ಲವೋ ಏನೋ? ಇಲ್ಲದೇ ಹೋಗಿದ್ದರೆ ಎಂದಿನ ಶೈಲಿಯಲ್ಲಿ ತನ್ನ ರಹಸ್ಯ ಅಡಗುತಾಣಕ್ಕೆ ಪರಾರಿಯಾಗುತ್ತಿದ್ದ. ಆದರೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸುತ್ತಿದ್ದಂತೆ ಸಲ್ದಾನನನ್ನು ಲಾಕ್ ಮಾಡಿದ್ದಾರೆ. ಆದರೆ ಒಬ್ಬಾತ ಹೊರಗಡೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿ ಗದ್ದೆ ಕಡೆಗೆ ಓಡಿದ್ದಾನೆ. ಆಗ ಪೊಲೀಸರು ತಮ್ಮ ಬೂಟು ಕಳಚಿ ಎದುರಿನ ಗದ್ದೆಯಲ್ಲಿ ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ಆರೋಪಿ ತಾನೊಬ್ಬ ಶ್ರೀಮಂತ ವ್ಯಕ್ತಿ ಎಂದು ಬಿಂಬಿಸಿ ಹೊರ ಜಿಲ್ಲೆ, ಹೊರ ರಾಜ್ಯದ ಉದ್ಯಮಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದ. ಭೂ ವ್ಯವಹಾರ ಮಾಡುತ್ತೇನೆ, ಬ್ಯಾಂಕ್‌ನಿಂದ ನೂರಾರು ಕೋಟಿ ಸಾಲವನ್ನು ಕಡಿಮೆ ಬಡ್ಡಿಯಲ್ಲಿ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ದರದಲ್ಲಿ ಕಮೀಷನ್, ಸ್ಟ್ಯಾಂಪ್ ಡ್ಯೂಟಿ ಎಂದೆಲ್ಲಾ ನಂಬಿಸಿ ಸುಮಾರು ಕೋಟಟಿ ರೂಪಾಯಿ ವರೆಗೂ ನಗದು ರೂಪದಲ್ಲಿ ಪಡೆದು ಬಳಿಕ ತಲೆ ಮರೆಸಿಕೊಳ್ಳುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಆಮೇಲೆ ದುಡ್ಡು ಕೊಟ್ಟವರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದ. ಮನೆಗೆ ಬಂದರೆ ಒಳಗಿನಿಂದಲೇ ಗಮನಿಸಿ ರಹಸ್ಯ ಕೋಣೆಯಲ್ಲಿ ಅಡಗುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ 3 ತಿಂಗಳಲ್ಲಿ ಆತನ ಖಾತೆಯಲ್ಲಿ 40 ಕೋ.ರೂ. ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ ಸೈಬರ್ ಠಾಣಾ ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.