ಕಾಸರಗೋಡು: ನಿನ್ನೆ ಅವಳ ಬರ್ತ್ ಡೇ…! ಮಳೆಯಿಂದಾಗಿ ಶಾಲೆಗಳಿಗೆ ರಜೆಯೂ ಇತ್ತು. ದೇವಸ್ಥಾನಕ್ಕೆ ಹೋಗಿ ಖುಷಿ ಖುಷಿಯಾಗಿ ಮನೆಗೆ ಬಂದಿದ್ದ ಅವಳು ಬರ್ತ್‌ಡೇ ದಿನವೇ ಶವವಾಗಿ ಪತ್ತೆಯಾಗಿದ್ದಾಳೆ. ಶೈಕ್ಷಣಿಕ ಒತ್ತಡದಿಂದ ಮಾನಸಿಕ ವೇದನೆ ಅನುಭವಿಸುತ್ತಿದ್ದ ಅವಳು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಾಸರಗೋಡಿನ ತ್ರಿಕರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಕಲಿಯುಯತ್ತಿದ್ದ ಐಯ್ಯಕ್ಕಾಡ್ ಉತ್ತರದ ಉಮೇಶ್ ಕುಮಾರ್ ಮತ್ತು ಸರಿತಾ ದಂಪತಿಯ ಪುತ್ರಿ ಆರ್ಯ ಎಂದು ಗುರುತಿಸಿದ್ದಾರೆ. ಆಕೆಗೆ ಜುಲೈ 17 ರಂದು 17 ವರ್ಷ ತುಂಬಿತ್ತು. ಭಾರೀ ಮಳೆಯಿಂದಾಗಿ ಆ ದಿನ ಯಾವುದೇ ತರಗತಿಗಳು ಇರಲಿಲ್ಲ. ಆರ್ಯ ಬೆಳಿಗ್ಗೆ ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡಿ ಖುಷಿಖುಷಿಯಾಗಿ ಮನೆಗೆ ಮರಳಿದ್ದರು ಎಂದು ಆಕೆಯ ಕುಟುಂಬ ತಿಳಿಸಿದೆ.
ಈ ಘಟನೆ ಬೆಳಿಗ್ಗೆ 11.30 ರ ಸುಮಾರಿಗೆ ಸಂಭವಿಸಿದೆ. ಆ ಸಮಯದಲ್ಲಿ, ಆಕೆಯ ತಾಯಿ ಸರಿತಾ ಮತ್ತು ಕಿರಿಯ ಸಹೋದರ ಆದರ್ಶ್ ಮಾತ್ರ ಮನೆಯಲ್ಲಿದ್ದರು. ಫ್ಯಾನ್ಸಿ ಅಂಗಡಿಯನ್ನು ನಡೆಸುತ್ತಿರುವ ಮತ್ತು ಕಾಲಿಕಡವುವಿನಲ್ಲಿ ಕೇಬಲ್ ಟಿವಿ ಕೆಲಸ ಮಾಡುವ ಆಕೆಯ ತಂದೆ ಉಮೇಶ್ ಕೆಲಸಕ್ಕಾಗಿ ಚೆಂಗನ್ನೂರಿಗೆ ಪ್ರಯಾಣ ಬೆಳೆಸಿದ್ದರು. ಮಗಳ ಸಾವಿನ ಸುದ್ದಿ ಕೇಳಿ ಗರಬಡಿದಂತಾದ ಅವರು ಮನೆಗೆ ಮರಳಿದ್ದಾರೆ.
ಆರ್ಯ ಅಧ್ಯಯನಶೀಲ ಮಗುವಾಗಿದ್ದು, ಅವರು ಕೆಲವೊಮ್ಮೆ ಶೈಕ್ಷಣಿಕ ಒತ್ತಡವನ್ನು ಅನುಭವಿಸುತ್ತಿದ್ದಳು ಎಂದು ಆಕೆಯ ಕುಟುಂಬಿಕರು ಹೇಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂನಲ್ಲಿರುವ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.