
ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್ ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಹೋಟೆಲ್ ಮತ್ತು ವಿಮಾನ ದರಗಳು ಆಕಾಶಕ್ಕೇರಿವೆ. ಸಾಮಾನ್ಯ ದಿನಗಳಲ್ಲಿ 10 ಸಾವಿರ ರೂ. ಇರುವ ಹೋಟೆಲ್ ಕೊಠಡಿಯ ಬಾಡಿಗೆ ಈಗ 45,000 ರಿಂದ 75,000 ರೂ.ಗಳಿಗೆ ಏರಿಕೆಯಾಗಿದೆ.

2023ರಲ್ಲಿ ನಡೆದ ಭಾರತ-ಆಸ್ಟ್ರೇಲಿಯ ಫೈನಲ್ ಪಂದ್ಯದ ವೇಳೆಯೂ ಇದೇ ಪರಿಸ್ಥಿತಿ ಎದುರಾಗಿತ್ತು. ಅಭಿಮಾನಿಗಳ ದಂಡೇ ಅಹ್ಮದಾಬಾದಿಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಈ ಅವಕಾಶವನ್ನು ಬಂಡವಾಳವಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ವಿಮಾನ ಪ್ರಯಾಣ ದರಗಳಲ್ಲೂ ಗಣನೀಯ ಏರಿಕೆಯಾಗಿದ್ದು, ಪ್ರಯಾಣಿಕರಿಗೆ ಹೆಚ್ಚುವರಿ ಹೊರೆಯಾಗಿದೆ. ಈ ಮಧ್ಯೆ, ಮುಂಬಯಿಯಿಂದ ಅಹ್ಮದಾಬಾದಿಗೆ ಎರಡು ವಿಶೇಷ ರೈಲುಗಳನ್ನು ಸಂಚರಿಸಲು ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕಂತಾಗಿದೆ.
