ತೈಲ ಮಾಫಿಯಾದ ಬೆತ್ತಲೆ ಜಗತ್ತು: ರಷ್ಯಾ ಎಂಬ ರಕ್ಕಸ, ಅಮೆರಿಕ ಎಂಬ ದಲ್ಲಾಳಿ- ಭಾರತದ ಎದೆಯ ಮೇಲೆ ಪುಟಿನ್ ಪಾದಯಾತ್ರೆ!

ನವದೆಹಲಿ: ನಿನ್ನೆವರೆಗೂ ಉಕ್ರೇನ್ ಯುದ್ಧದ ನೆಪದಲ್ಲಿ ನಮಗೆ ʻಡಿಸ್ಕೌಂಟ್’ ಮೇಲೆ ಡಿಸ್ಕೌಂಟ್ ಕೊಟ್ಟಿದ್ದ ವ್ಲಾಡಿಮಿರ್ ಪುಟಿನ್, ಈಗ ಸಮಯ ಸಾಧಿಸಿ ನಮಗೆ ʻಬರೆ’ ಹಾಕುತ್ತಿದ್ದಾನೆ. ಅತ್ತ ಇರಾನ್ ಮತ್ತು ಇಸ್ರೇಲ್ ಕಿತ್ತಾಡುತ್ತಿದ್ದರೆ, ಇತ್ತ ಹಾರ್ಮುಜ್ ಜಲಸಂಧಿಯಲ್ಲಿ ತೈಲದ ಹಡಗುಗಳು ಸ್ತಬ್ಧವಾಗಿವೆ. ಬೇರೆ ದಾರಿಯೇ ಇಲ್ಲ ಅಂತ ನಮಗೆ ಗೊತ್ತಾದ ಕ್ಷಣದಲ್ಲೇ, ರಷ್ಯಾ ತನ್ನ ಅಸಲಿ ಮುಖ ತೋರಿಸಿದೆ. ಬ್ಯಾರೆಲ್‌ಗೆ 30 ಡಾಲರ್ ಕಡಿಮೆ ಕೊಡುತ್ತಿದ್ದವನು, ಈಗ ಬ್ರೆಂಟ್ ಕ್ರೂಡ್‌ಗಿಂತಲೂ 5 ಡಾಲರ್ ಹೆಚ್ಚು ಕೇಳ್ತಿದ್ದಾನೆ! ಅಂದರೆ, ನಾವು ಇಷ್ಟು ದಿನ ಕುಡಿದ ಅಗ್ಗದ ತೈಲದ ಅಮಲು ಈಗ ಹ್ಯಾಂಗೋವರ್ ಆಗಿ ಕಾಡತೊಡಗಿದೆ.

ಇನ್ನು ಈ ಅಮೆರಿಕದ್ದು ಯಾವಾಗಲೂ ದ್ವಂದ್ವ ನೀತಿ. ಮೊದಲು “ರಷ್ಯಾದಿಂದ ತೈಲ ತರಬೇಡಿ” ಎಂದು ಬೆರಳು ತೋರಿಸಿ ಬೆದರಿಸಿತ್ತು. ಈಗ ಮಿಡಲ್ ಈಸ್ಟ್ ಹೊತ್ತಿ ಉರಿಯುತ್ತಿದ್ದಂತೆ, ತಾನೇ ʻವೈವರ್’ (Waiver) ಕೊಟ್ಟು “ಪ್ಲೀಸ್, ರಷ್ಯಾ ತೈಲ ಖರೀದಿಸಿ” ಅಂತ ಭಾರತದ ಕಾಲು ಹಿಡಿಯುತ್ತಿದೆ. ಯಾಕೆ ಗೊತ್ತಾ? ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿದರೆ ಅಮೆರಿಕದ ಡಾಲರ್ ಸಾಮ್ರಾಜ್ಯಕ್ಕೂ ನಡುಕ ಶುರುವಾಗುತ್ತದೆ. ಆದರೆ ಅಮೆರಿಕ ಇಟ್ಟ ಈ ಒಂದು ಹೆಜ್ಜೆ ರಷ್ಯಾಕ್ಕೆ ʻಗೋಲ್ಡನ್ ಚಾನ್ಸ್’ ಕೊಟ್ಟಂತಾಗಿದೆ. ಅಮೆರಿಕ ಅನುಮತಿ ನೀಡಿದ ಮರುಕ್ಷಣವೇ ರಷ್ಯಾ ದರ ಏರಿಸಿಬಿಟ್ಟಿತು! ಇದು ಒಂಥರಾ ನರಿ ಮತ್ತು ಹುಲಿಯ ನಡುವೆ ಸಿಕ್ಕಿಹಾಕಿಕೊಂಡ ಕುರಿಯ ಸ್ಥಿತಿ.

ಹಡಗುಗಳು ಈಗ ಸುಯೆಜ್ ಕಾಲುವೆ ಬಿಟ್ಟು ಆಫ್ರಿಕಾದ ಗುಡ್ ಹೋಪ್ ಭೂಶಿರವನ್ನು ಸುತ್ತಿ ಬರಬೇಕು. ಸಮುದ್ರದ ಹಾದಿ ಉದ್ದವಾದಷ್ಟು ನಮ್ಮ ಪೆಟ್ರೋಲ್ ಬೆಲೆ ಏರುತ್ತಲೇ ಹೋಗುತ್ತದೆ. ಇನ್ಶೂರೆನ್ಸ್ ಕಂಪೆನಿಗಳಂತೂ ಸುಲಿಗೆಗೆ ನಿಂತಿವೆ. ಭಾರತದ ಪಶ್ಚಿಮ ಕರಾವಳಿಗೆ ಈ ತೈಲ ಬಂದು ತಲುಪುವಾಗ ಅದರ ಬೆಲೆ ಕೇಳಿದರೆ ಸಾಮಾನ್ಯ ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆಗುವುದು ಗ್ಯಾರಂಟಿ.

ಬ್ರೆಂಟ್ ಕ್ರೂಡ್ 92 ಡಾಲರ್ ದಾಟಿದೆ ಅಂದರೆ ನಿಮ್ಮ ಗಾಡಿಯ ಟ್ಯಾಂಕ್ ತುಂಬಿಸುವುದು ಇನ್ನು ಮುಂದೆ ಕನಸಿನ ಮಾತಾಗಬಹುದು. ಅಗ್ಗದ ತೈಲದ ಕಾಲ ಮುಗಿಯಿತು, ಇನ್ನು ಮುಂದೆ ಶುರುವಾಗುವುದು ʻಪೆಟ್ರೋಲ್ ಸುನಾಮಿ’!. ತೈಲ ಸುಲಿಯ ಚಕ್ರವ್ಯೂಹಕ್ಕೆ ಸಿಲುಕಿರುವ ಭಾರತ ಯಾವ ರೀತಿ ಅದನ್ನು ಭೇದಿಸಿ ಹೊರಬರುತ್ತಿದೆ ಎನ್ನುವುದು ಸದ್ಯದ ಕುತೂಹಲ.

error: Content is protected !!