ಮಂಗಳೂರು: ನಿನ್ನೆ ಸಂಜೆಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ.
ಮೂಲ್ಕಿ ಅತಿಕಾರಿಬೆಟ್ಟು, ಹಳೆಯಂಗಡಿ, ಕೊಪ್ಪಲ, ಪಂಜ, ಪಾವಂಜೆಯ ಭತ್ತದ ಗದ್ದೆಗಳು ಮುಳುಗಡೆಯಾಗಿದ್ದು ಕೆಲವು ಭಾಗಗಳಲ್ಲಿ ರಸ್ತೆಗಳು ಬಂದ್ ಆಗಿವೆ.
ಕುಳಾಯಿ, ಹೊಸಬೆಟ್ಟು, ಕೊಟ್ಟಾರ ಚೌಕಿ, ಜೆಪ್ಪು, ಮಾರ್ನಮಿಕಟ್ಟೆ, ಪಡೀಲ್, ಮಂಗಳೂರಿನ ಒಳಭಾಗದಲ್ಲೂ ಕೃತಕ ನೆರೆ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಲೆಮಾರ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು ಜನರು ಸಮಸ್ಯೆಯನ್ನು ಎದುರಿಸಿದ್ದಾರೆ.
ಮಳೆಯಿಂದಾಗಿ ಹಾನಿ ಉಂಟಾಗಿರುವ ಮಾಲೆಮಾರ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ರಾತ್ರಿಯೇ ಭೇಟಿ ಕೊಟ್ಟು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.