ಮರಳು, ಕೆಂಪು ಮುರಕಲ್ಲು ಸಮಸ್ಯೆ ಪರಿಹರಿಸದೇ ಇದ್ದರೆ ಪ್ರತಿಭಟನೆ: ಸಿವಿಲ್ ಕಂಟ್ರಾಕ್ಟರ್ ಅಸೋಸಿಯೇಷನ್ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ನಿರ್ಮಾಣ ಕ್ಷೇತ್ರದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಸಮಯದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಉತ್ಕೃಷ್ಟ ಗುಣಮಟ್ಟದ ಮರಳು, ಕೆಂಪು ಮುರಕಲ್ಲು ಹಲವಾರು ವರ್ಷಗಳಿಂದ ನ್ಯಾಯಯುತವಾದ ರೀತಿಯಲ್ಲಿ ದೊರಕದೆ ಗುತ್ತಿಗೆದಾರರಾದ ನಾವು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುತ್ತೇವೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಸಿವಿಲ್ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಮಹಾಬಲ ಕೊಟ್ಟಾರಿ ಎಚ್ಚರಿಕೆ ನೀಡಿದ್ದಾರೆ.

ಅವರು ಮಂಗಳೂರಿನ ಪ್ರಸ್‌ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ಜಿಲ್ಲಾಡಳಿತವು ಕ್ಷುಲ್ಲಕ ಕಾನೂನಿನ ನೆಪವೊಡ್ಡಿ ನಮ್ಮ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ವ್ಯಾಪಕವಾಗಿ ಬಳಸಲ್ಪಡುವ ಕೆಂಪುಮುರಕಲ್ಲಿನ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವ ಕಾರಣ ಸಮಸ್ಯೆಯು ಉಲ್ಬಣಾವಸ್ಥೆಗೆ ತಲುಪಿದೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣವೇನೆಂದರೆ, ಕರಾವಳಿ ಜಿಲ್ಲೆಗಳು ರಾಜ್ಯದ ಇತರ ಜಿಲ್ಲೆಗಳಿಂದ ಭೌಗೋಳಿಕವಾಗಿ ಭಿನ್ನವಾಗಿದ್ದು, ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾದ ಮರಳು ನೀತಿಯನ್ನು ರೂಪಿಸುವ ಬಗ್ಗೆ ಹಲವಾರು ವರುಷಗಳಿಂದ ಸರಕಾರದ ಪ್ರತಿನಿಧಿಗಳು ಹೇಳುತ್ತಾ ಬಂದಿರುವರಾದರೂ ಅದು ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಅದೇ ರೀತಿ ದೇವರ ವರದಾನವಾಗಿ, ನೈಸರ್ಗಿಕವಾಗಿ ಸಿಗುತ್ತಿರುವ ಕಟ್ಟಡ ಕಾಮಗಾರಿಗಳಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಕೆಂಪುಕಲ್ಲು ಕೂಡ ಅಲಭ್ಯವಾಗಿದ್ದು, ಇಡೀ ನಿರ್ಮಾಣ ಕ್ಷೇತ್ರದಲ್ಲಿ ತಲ್ಲಣವನ್ನುಂಟು ಮಾಡಿದೆ. ವಿಶೇಷವಾಗಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಅಥವಾ ಎರಡು ಮಹಡಿಯ ಮನೆಗಳನ್ನು ಯಾವುದೇ ಕಾಂಕ್ರೀಟ್ ಪಿಲ್ಲರ್‌ಗಳ ಸಹಾಯವಿಲ್ಲದೇ ಬರೀ ಕೆಂಪು ಕಲ್ಲುಗಳನ್ನು ಬಳಸಿಕೊಂಡು ನಿರ್ಮಿಸುತ್ತಿರುವುದರಿಂದ ಮಧ್ಯಮ ವರ್ಗದ ಮತ್ತು ಬಡಜನರ ಮನೆ ನಿರ್ಮಾಣದ ಕನಸಿಗೆ ತಣ್ಣೀರೆರಚಿದಂತಾಗಿದೆ.


ಗುತ್ತಿಗೆದಾರರಾದ ನಾವು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮನ್ನು ನಾವು ಜೀವನಪರ್ಯಂತ ತೊಡಗಿಸಿಕೊಂಡು ಬಂದಿದ್ದು, ರಾಜ್ಯದ ಬೊಕ್ಕಸಕ್ಕೆ ತೆರಿಗೆಯ ರೂಪದಿಂದ ನಮ್ಮ ದುಡಿಮೆಯ ಪಾಲನ್ನು ಭರಿಸುತ್ತಾ ಬಂದಿದ್ದೇವೆ. ಈ ಉದ್ಯಮವನ್ನೇ ನಂಬಿರುವ ನಮ್ಮ ಜಿಲ್ಲೆಯ ಎಲ್ಲಾ ವರ್ಗದ ಕಾರ್ಮಿಕರಲ್ಲದೆ, ಹೊರಜಿಲ್ಲೆಯ, ಹೊರ ರಾಜ್ಯಗಳಿಂದ ಬಂದಂತಹ ಕಾರ್ಮಿಕರೊಂದಿಗೆ ನಾವು ಕೂಡ ಕೆಲಸವಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ಬಂದೊದಗಿದೆ. ಅದಲ್ಲದೆ ಈ ಪರಿಸ್ಥಿತಿಯು ಹೀಗೆಯೇ ಮುಂದುವರಿದರೆ ಜಿಲ್ಲೆಯ ಆರ್ಥಿಕತೆಗೆ ಬಹುದೊಡ್ಡ ಹಾನಿಯನ್ನುಂಟು ಮಾಡಬಹುದು. ಆದುದರಿಂದ ಜಿಲ್ಲಾಡಳಿತವು ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಪರಿಹರಿಸಬೇಕು ಇಲ್ಲದಿದ್ದರೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!