ಬೆಳಗಾವಿ: ಉತ್ತರ ಕರ್ನಾಟಕದ ಯುವ ಗಾಯಕ ಮಾರುತಿ ಬೂದಿಹಾಳ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಿದ್ದರಾಮ ವಡೆಯರ್ ಹಾಗೂ ಆಕಾಶ್ ಪೂಜಾರಿ ಎಂದು ಹೆಸರಿಸಲಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ಘಟನೆ ನಡೆದಿದ್ದು ಮಾರುತಿ ಅಡಿವೆಪ್ಪ ಲಠ್ಠೆ (22) ಹತ್ಯೆಯಾದ ಯುವ ಹಾಡುಗಾರ. ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈರಪ್ಪ ಆ್ಯಂಡ್ ಗ್ಯಾಂಗ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮಾರುತಿ ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡುಗಳನ್ನು ರಚಿಸಿ ಹಾಡುತ್ತಿದ್ದ. ಕೇವಲ ಐದೇ ಐದು ಸಾವಿರ ರೂಪಾಯಿಗೆ ಮಾರುತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿ ಈರಪ್ಪ ಅಕ್ಕಿವಾಟೆ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದ ಮಾರುತಿ, ಕಬ್ಬಿನ ಕಟಾವು ಮಾಡುವ ತಂಡದಲ್ಲಿ ಕೆಲಸ ಮಾಡಿದ್ದ ಮಾರುತಿ 45 ಸಾವಿರ ರೂಪಾಯಿ ವಾಪಸ್ ಕೊಟ್ಟಿದ್ದ. ನಂತರ ತನ್ನ ಹಾಡುಗಳಿಗೆ ಡಿಮ್ಯಾಂಡ್ ಬಂದ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮತ್ತು ಕಾರ್ಖಾನೆಗೆ ಸಾಗಣೆ ಮಾಡುವ ಕೆಲಸವನ್ನು ಬಿಟ್ಟು ಸಂಗೀತದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಈರಪ್ಪ ಮತ್ತಾತನ ತಂಡ ಮಾರುತಿಯನ್ನು ಬರ್ಬರವಾಗಿ ಹತ್ಯೆ ಮಾಡಿದೆ.