ಹುಬ್ಬಳ್ಳಿ: ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಸೇರಲು ಮುಂದಾಗಿದ್ದರು ಎನ್ನುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ವಿಧಾಸಭೆ ಬಿಜೆಪಿ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ, ಲಿಂಬಾವಳಿ ಅವರೊಂದಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಈ ಮಾತು ಯಾಕೆ ಹೇಳಲಿಲ್ಲ? ಅವರಿಂದ ಎಲ್ಲಾ ಸೌಲತ್ತು ಪಡೆದು ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಅರವಿಂದ ಲಿಂಬಾವಳಿ ಹೇಳಿರುವುದರಲ್ಲಿ ಯಾವುದೇ ಸತ್ಯವಿಲ್ಲ. ಬಿಜೆಪಿಯಿಂದ ಹೊರಹೋಗಿ ಹೊಸ ಪಕ್ಷ ಕಟ್ಟಿದ್ದರು ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದರು.
ಅಲ್ಲದೆ ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದೊರೆಯಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಅವರವರ ಅಭಿಪ್ರಾಯಗಳನ್ನು ಹೇಳಲು ಅವಕಾಶವಿದೆ. ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಮಾತನಾಡುವುದು ಸರಿಯಲ್ಲ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಂಡಿರುವ ಉದಾಹರಣೆಗಳಿವೆ. ರಾಜ್ಯದ ಪಕ್ಷದಲ್ಲಿನ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಸಮಯ ಬಂದಾಗ ಸೂಕ್ತ ಕ್ರಮ ಕೈಗೊಳ್ಳಲಿದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಪಕ್ಷಕ್ಕೆ ಕರೆದುಕೊಂಡು ಬರುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಅವರಿಗೆ ಪಕ್ಷದಿಂದ ಯಾವ ಅನ್ಯಾಯ ಆಗಿಲ್ಲ ಎಂದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಕುರ್ಚಿ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ನೆಲಕಚ್ಚಿದೆ. ಆಡಳಿತ ಪಕ್ಷದ ಶಾಸಕರೇ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಅನುದಾನವಿಲ್ಲದೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕೇವಲ ಗ್ಯಾರಂಟಿ ಯೋಜನೆ ಹೆಸರಲ್ಲಿ ಆಡಳಿತ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರು.