ಮುಂಬೈ: ನಟನೊಬ್ಬನಿಗೆ 77 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಆಲಿಯಾ ಭಟ್ ಅವರ ಮಾಜಿ ಆಪ್ತ ಕಾರ್ಯದರ್ಶಿಯನ್ನು ಜುಹು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ವೇದಿಕಾ ಪ್ರಕಾಶ್ ಶೆಟ್ಟಿ (32) ಬಂಧಿತ ಆರೋಪಿ.
ಭಟ್ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಖಾತೆ ಹಾಗೂ ನಟಿಯ ಖಾತೆಯಿಂದ ಸುಮಾರು 76.9 ಲಕ್ಷ ರೂ. ಹಣ ವಂಚಿಸಿದ ಆರೋಪ ವೇದಿಕಾ ಮೇಲೆ ಹೊರಿಸಲಾಗಿದೆ. 2022ರ ಮೇ ಮತ್ತು 2024ರ ಆಗಸ್ಟ್ ತಿಂಗಳ ನಡುವೆ ಈ ವಂಚನೆ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಆಲಿಯಾ ಭಟ್ ಅವರ ತಾಯಿ, ನಟಿ-ನಿರ್ದೇಶಕಿ ಸೋನಿ ರಜ್ದಾನ್ ಕಳೆದ ಜನವರಿ 23ರಂದು ಜುಹು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ದೂರನ್ನಾಧರಿಸಿ ಕ್ರಿಮಿನಲ್ ಮತ್ತು ವಂಚನೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ವೇದಿಕಾಗಾಗಿ ಹುಡುಕಾಟ ನಡೆಸಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ವೇದಿಕಾ 2021ರಿಂದ 2024ರ ವರೆಗೆ ಆಲಿಯಾ ಭಟ್ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಳು. ಈ ವೇಳೆ ನಟಿಗೆ ಸಂಬಂಧಿಸಿದ ಹಣಕಾಸಿನ ದಾಖಲೆಗಳನ್ನು ನೋಡಿಕೊಳ್ಳುತ್ತಿದ್ದಳು. ನಟಿಗೆ ಸಂಬಂಧಿದ ವೇಳಾಪಟ್ಟಿಯನ್ನೂ ಈಕೆಯೇ ನಿರ್ವಹಿಸುತ್ತಿದ್ದಳು. ಈ ಸಮಯದಲ್ಲಿ ನಕಲಿ ಹಣಕಾಸಿನ ಬಿಲ್‌ಗಳನ್ನು ತಯಾರಿಸಿ, ಆಲಿಯಾ ಭಟ್ ಸಹಿ ಮಾಡಿಸಿ ಹಣ ವಂಚಿಸಿದ್ದಾಳೆ. ನಟಿ ನಕಲಿ ಬಿಲ್‌ಗಳಿಗೆ ಸಹಿ ಮಾಡಿದ ಬಳಿಕ ಸ್ನೇಹಿತರ ಖಾತೆಗಳಿಗೆ ಹಣ ವರ್ಗಾಯಿಸಿದ್ದಾಳೆ ವೇದಿಕಾ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಅರೆಸ್ಟ್
ಆಲಿಯಾ ಭಟ್ ಅವರ ತಾಯಿ ದೂರು ನೀಡಿದ್ದ ಬಳಿಕ ಎಸ್ಕೇಪ್ ಆಗಿದ್ದ ವೇದಿಕಾ ಸ್ಥಳ ಬದಲಾಯಿಸುತ್ತಲೇ ಇದ್ದಳು. ಕೊನೆಗೆ ರಾಜಸ್ಥಾನದ ಬಳಿಕ ಕರ್ನಾಟಕದ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದಳು. ಖಚಿತ ಮಾಹಿತಿ ಪಡೆದ ಪೊಲೀಸರು ಆಕೆಯನ್ನ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಮುಂಬೈಗೆ ಕರೆತಂದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.