ಮಂಗಳೂರು: “ಧಾರ್ಮಿಕ ಸೇವಾ ಚಟುವಟಿಕೆಗಳ ಮೂಲಕ ಕರಾವಳಿಯಲ್ಲಿ ಸಂಚಲನ ಮೂಡಿಸಿರುವ ಹಿಂದೂ ಯುವ ಸೇನೆಯ ಪದವು ಶಾಖೆಯು ಕಳೆದ ಎರಡೂವರೆ ದಶಕಗಳ ಪೂರ್ವದಲ್ಲಿ ಮಂಗಳೂರಿನ ಕುಲಶೇಖರ ಪದವು ಮೇಗಿನ ಮನೆ ಪರಿಸರದಲ್ಲಿ ನಿರ್ಮಿಸಿದ್ದ ಶ್ರೀ ಶನೈಶ್ಚರ ಮಂದಿರವನ್ನು ದೇವಸ್ಥಾನ ಸ್ವರೂಪದಲ್ಲಿ ಪುನರ್ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ದೇವಸ್ಥಾನ ನಿರ್ಮಾಣ ಶಿಲಾನ್ಯಾಸ ನೆರವೇರಿಸಲಾಗಿದೆ. ಶ್ರೀ ದುರ್ಗಾ ದೇವಿ ಹಾಗೂ ಮಹಾಗಣಪತಿ ಗುಡಿ ಸಹಿತ ಶ್ರೀ ಶನಿ ದೇವರ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ನವೆಂಬರ್ 2025ರಲ್ಲಿ ಪ್ರತಿಷ್ಠೆ ಬ್ರಹ್ಮಕಲಶ ನಡೆಸಲಾಗುವುದು“ ಎಂದು ಅಧ್ಯಕ್ಷ ಕದ್ರಿ ನವನೀತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಈಗಾಗಲೇ ಮಂದಿರದ ಸಮೀಪ 8 ಸೆಂಟ್ಸ್ ಸ್ಥಳವನ್ನು ಖರೀದಿ ಮಾಡಲಾಗಿದ್ದು ಇನ್ನೂ ಹೆಚ್ಚುವರಿ 10 ಸೆಂಟ್ಸ್ ಜಮೀನು ಖರೀದಿ ಮಾಡುವ ಯೋಜನೆ ಇದೆ.
ಈ ಯೋಜನೆಗೆ ಒಟ್ಟು ಮೂರು ಕೋಟಿ ರೂಪಾಯಿ ವೆಚ್ಚ ತಗಲಲಿದೆ.
ದೇವಸ್ಥಾನದ ನಿರ್ಮಾಣ ಕಾರ್ಯವು ಊರ ಪರವೂರ ಭಕ್ತರ ಸಹಾಯದಿಂದ ಭರದಿಂದ ಸಾಗುತ್ತಿದ್ದು ಮುಂದಿನ ಕೆಲಸ ಕಾರ್ಯಗಳಿಗೆ ಆರ್ಥಿಕ ಕ್ರೋಡಿಕರಣವಾಗಬೇಕಾಗಿದೆ.
2018ರಲ್ಲಿ ಪದವು ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್‌ನ ನೇತೃತ್ವದಲ್ಲಿ 7 ದಿನ ಪರ್ಯಂತ ಜರಗಿದ್ದ ಚಾರಿತ್ರಿಕ ಶ್ರೀ ಸಗ್ರಹಮುಖ ಶನೈಶ್ಚರ ಮಹಾಯಾಗದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂಸೇವಕರ, ಭಕ್ತರ ಭಕ್ತಿಯ ಫಲಶ್ರುತಿಯಿಂದಾಗಿ ಶನಿದೇವರ ದೇವಸ್ಥಾನವು ನಿರ್ಮಾಣವಾಗುತ್ತಿದೆ“ ಎಂದವರು ಹೇಳಿದರು.
ಈ ದೆಶೆಯಲ್ಲಿ ಗ್ರಾಮದ ಜನರಿಂದ ತನು ಮನ ಧನದ ಸಹಕಾರವನ್ನು ಯಾಚಿಸುತ್ತಿದ್ದು ಜು.13ರಂದು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು ಇದಕ್ಕಾಗಿ 11 ವಲಯ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗೌರವಾಧ್ಯಕ್ಷ ಮೋನಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ, ಮಾತೃ ಮಂಡಳಿ ಅಧ್ಯಕ್ಷೆ ವಿಜಯ ಅರುಣ್ ಮತ್ತಿತರರು ಉಪಸ್ಥಿತರಿದ್ದರು.