ಧರ್ಮಸ್ಥಳ ಗ್ರಾಮದಲ್ಲಿ ಶವಗಳ ರಹಸ್ಯ ವಿಲೇವಾರಿ ಪ್ರಕರಣ: ತಲೆ ಬುರುಡೆಯ ಫೋಟೋದ ಕಲರ್‌ ಝೆರಾಕ್ಸ್‌ ಪ್ರತಿ ಸಲ್ಲಿಕೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿದ ರಹಸ್ಯ ವ್ಯಕ್ತಿ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್‌ ಝೆರಾಕ್ಸ್‌ ಪ್ರತಿಯನ್ನು ಮಾತ್ರ ಸಲ್ಲಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

AI ಆಧರಿಸಿ ಈ ಚಿತ್ರವನ್ನು ರೂಪಿಸಲಾಗಿದೆ. (ಸಾಂದರ್ಭಿಕ ಚಿತ್ರ)

ರಹಸ್ಯ ವ್ಯಕ್ತಿಗೆ ದೂರುದಾರರಿಗೆ ಜೀವಬೆದರಿಕೆ ಒಡ್ಡಿ, ಅಪರಾಧ ಕೃತ್ಯಗಳ ಮೃತದೇಹಗಳನ್ನು ತನ್ನ ಮೂಲಕ ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಈ ರೀತಿಯಲ್ಲಿ ಹಲವಾರು ಮೃತದೇಹಗಳನ್ನು ದೂರುದಾರರು ವಿಲೇವಾರಿ ಮಾಡಿದ್ದು, ಪ್ರಸ್ತುತ ತನಗೆ ಪಾಪಪ್ರಜ್ಞೆ ಕಾಡುತ್ತಿರುವುದರಿಂದ, ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ, ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ತಾನು ಸಿದ್ದವಿರುವುದಾಗಿ ಜು.3ರಂದು ಪೊಲೀಸ್ ಅಧೀಕ್ಷಕರ ಕಛೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿರುತ್ತದೆ. ಈ ದೂರಿನ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು, ಜು.4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 39/2025, ಕಲಂ: 211(a) ಬಿ ಎನ್‌ ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ ದೂರುದಾರರು ದೂರಿನಲ್ಲಿ ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಮೇರೆಗೆ, ದೂರುದಾರರ ಮಾಹಿತಿಯನ್ನು ಪೊಲೀಸರು ರಹಸ್ಯವಾಗಿ ಇರಿಸಿದ್ದಾರೆ.

ಇದೀಗ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರುದಾರರ ವಕೀಲರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯನ್ನು ನೋಡಿ, ಅವರಯ ದೂರಿನಲ್ಲಿ ಉಲ್ಲೇಖಿಸಿರುವ ಕಳೇಬರಹದ ಬಗ್ಗೆ ಪೊಲೀಸರು ವಿಚಾರಿಸಿದ್ದರು.

ಆದರೆ ದೂರಿಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್‌ ಝೆರಾಕ್ಸ್‌ ಪ್ರತಿಯನ್ನು ಮಾತ್ರ ಸಲ್ಲಿಸಿದ್ದಾರೆ. ಇದನ್ನು ಹೊರತುಪಡಿಸಿದಂತೆ ಯಾವುದೇ ಕಳೆಬರಹವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿಲ್ಲ. ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವ ವೇಳೆ ಕಳೇಬರಹವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿದ್ದಾಗಿ ಪೊಲೀಸ್‌ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

error: Content is protected !!