ಬೆಂಗಳೂರು: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿಗೆ ವೇದಿಕೆ ಮೇಲೆ ಹೊಡೆಯಲು ಕೈ ಎತ್ತಿದ್ದ ಸಿಎಂ ಸಿದ್ದರಾಮಯ್ಯ ವರ್ತನೆಗೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದರಿಂದ ತನಗೆ ಅವಮಾನವಾಗಿದೆ ಎಂದು ಭರಮನಿ ಸ್ವಯಂ ನಿವೃತ್ತಿಗೆ ಮುಂದಾಗಿದ್ರು ಆದರೆ ನಿನ್ನೆ ಸಂಜೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಫೋನ್ ಮಾಡಿ ಎಸ್ಪಿ ನಾರಾಯಣ ಭರಮನಿ ಜೊತೆ ಮಾತಾಡಿದ್ದು ಈ ಹಿನ್ನೆಲೆಯಲ್ಲಿ ಅವರಿಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪೊಲೀಸ್ ಅಧಿಕಾರಿ ಜೊತೆ ಮಾತಾಡಿರುವ ಸಿಎಂ ಸಿದ್ದರಾಮಯ್ಯ ʻನಾನು ಬೇಕು ಅಂತ ಮಾಡಿದ ಕೆಲಸವಲ್ಲ. ನಿನಗೆ ಅಗೌರವ ಅಥವಾ ಅಪಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಮ್ಮ ಪ್ರತಿಭಟನೆಯಲ್ಲಿ ಬಿಜೆಪಿ ಬಂದು ಅಡ್ಡಿಪಡಿಸದ್ದಕ್ಕೆ ನನಗೆ ಬೇಸರವಾಯ್ತು. ಕೋಪದಲ್ಲಿ ಈ ಘಟನೆ ನಡೆದು ಹೋಗಿದೆʼ ಎಂದು ಹೇಳಿದ್ದಾಗಿ ಮೂಲಗಳು ಹೇಳಿವೆ.
ಎಂದಿನಂತೆ ಇಂದು ಎಎಸ್ಪಿ ನಾರಾಯಣ ಭರಮನಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎಸ್ಪಿ ಕಚೇರಿಯಲ್ಲಿನ ತಮ್ಮ ಚೇಂಬರ್‌ಗೆ ಆಗಮಿಸಿದ ಭರಮನಿ ಸಿಎಂ ಸಿದ್ದರಾಮಯ್ಯ ಅವರು ನನಗೆ ಫೋನ್ ಮಾಡಿದ್ರು. ಈಗ ನಾನು ನನ್ನ ಕೆಲಸ ಆರಂಭಿಸುತ್ತಿದ್ದೇನೆ. ಹೆಚ್ಚಿಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ವಿವಾದಗಳಿಗೆ ತೆರೆ ಎಳೆದಿದ್ದಾರೆ.