ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಮುರ ಇಟ್ಟಿಗೆ (ಕೆಂಪು ಕಲ್ಲು) ಸಮಸ್ಯೆಯನ್ನು ವಾರದೊಳಗೆ ಬಗೆಹರಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಜುಲೈ 3ರಂದು ನಡೆಸಬೇಕಿದ್ದ ಪ್ರತಿಭಟನೆಯನ್ನು ಮುಂದೂಡಿದ್ದೇವೆ. ಒಂದು ವಾರದ ಬಳಿಕವೂ ಸಮಸ್ಯೆ ಬಗೆಹರಿಯದಿದ್ದರೆ ಮುಂದಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೆಂಪು ಮುರ ಇಟ್ಟಿಗೆ ಮಾಲಕರ ಒಕ್ಕೂಟ ಹೇಳಿದೆ.
ಜಿಲ್ಲೆಯಲ್ಲಿ ಕೆಂಪು ಮುರ ಇಟ್ಟಿಗೆ ತೆಗೆಯಲು ಪರವಾನಿಗೆ ಸರಳೀಕರಣ ಬಗ್ಗೆ ಜಿಲ್ಲಾಧಿಕಾರಿ ಜತೆ ಬುಧವಾರ ಸಭೆ ನಡೆದಿದೆ. ವಾರದೊಳಗೆ ಬೆಂಗಳೂರಿನಲ್ಲಿ ಗಣಿ ಸಚಿವರ ಸಮ್ಮುಖ ಉನ್ನತ ಮಟ್ಟದ ಸಭೆ ನಡೆದು ಸಮಸ್ಯೆಗೆ ಪರಿಹಾರ ರೂಪಿಸಲಾಗುವುದು ಎಂಬ ಭರವಸೆಯಂತೆ ಪ್ರತಿಭಟನೆ ಮುಂದೂಡಿದ್ದೇವೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿ ಭಾಗದಲ್ಲಿ ಅನೇಕ ಜಾಗಗಳಿಂದ ಮುರ ಮಣ್ಣನ್ನು ಐಎಲ್‌ಎಂಎಸ್ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಯಾವುದೇ ಖನಿಜಾಂಶ ಇಲ್ಲದ ಕಾರಣ ಮಣ್ಣು ಪರೀಕ್ಷೆಗೆ ಒಳಪಡಿಸುವುದನ್ನು ರದ್ದುಗೊಳಿಸಬೇಕು. ಈಗಾಗಲೇ 3ಎ ಪರವಾನಿಗೆಯಲ್ಲಿ 1 ಟನ್ ಮುರ ಇಟ್ಟಿಗೆಗೆ ವಿಧಿಸಿರುವ ತೆರಿಗೆಯ ಮೊತ್ತ 282 ರೂ. ಆಗಿದ್ದು, ಈ ತೆರಿಗೆಯ ಮೊತ್ತವನ್ನು ಪ್ರತಿ 1 ಟನ್ ಮುರ ಇಟ್ಟಿಗೆಗೆ ಕೇರಳ ರಾಜ್ಯ ತೆರಿಗೆಯ ಮಾದರಿಯಂತೆ 32 ರೂ. ನಿಗದಿಪಡಿಸಬೇಕು. ಈಗಾಗಲೇ ನಿಗದಿಪಡಿಸಿರುವ ಪರವಾನಿಗೆಯ ಅವಧಿಯನ್ನು 6 ತಿಂಗಳಿನಿಂದ 2 ವರ್ಷದವರೆಗೆ ವಿಸ್ತರಿಸಬೇಕು, ಮುರ ಇಟ್ಟಿಗೆಯನ್ನು ಕಟ್ಟಡ ನಿರ್ಮಾಣಕ್ಕೆ ಮಾತ್ರ ಬಳಸುವ ಕಾರಣ ಇದು ಗಣಿಗಾರಿಕೆಯಾಗಿರುವುದಿಲ್ಲ. ಇದರಿಂದ ನಾವು ಯಾವುದೇ ಖನಿಜಾಂಶವನ್ನು ಹೊರ ತೆಗೆಯುವುದಿಲ್ಲ. ಆದ್ದರಿಂದ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಒಕ್ಕೂಟದಲ್ಲಿ 300ರಷ್ಟು ಸದಸ್ಯರಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 6 ಪರವಾನಿಗೆ ಮಾತ್ರ ಇದೆ. ಈ ಹಿಂದೆ ಒಕ್ಕೂಟದಿಂದ 250 ಪರವಾನಿಗೆ ಮಾಡಿಕೊಡಲಾಗಿತ್ತು. ರಾಜಧನ ಹೆಚ್ಚಳದಿಂದ ಅನಧಿಕೃತ ವ್ಯವಹಾರ ಹೆಚ್ಚಳಗೊಂಡಿದೆ. ಅಧಿಕೃತ ಪರವಾನಿಗೆ ಹೊಂದಿರುವವರಿಗೆ ಯಾರೂ ತೊಂದರೆ ನೀಡುತ್ತಿಲ್ಲ. ಮಣ್ಣು ಪರೀಕ್ಷೆ ರದ್ದು ಹಾಗೂ 1 ಟನ್ ಮುರ ಇಟ್ಟಿಗೆಗೆ 32 ರೂ. ತೆರಿಗೆಯನ್ನು ವಿಧಿಸಿದಾಗ ಈಗಾಗಲೇ ಪರವಾನಿಗೆ ಇಲ್ಲದೆ ಕೆಲಸ ನಿರ್ವಹಿಸುವವರಿಗೆ ಪರವಾನಿಗೆ ಮಾಡಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ರಾಜ್ಯದ ಬೊಕ್ಕಸಕ್ಕೆ ರಾಜಧನ ಸಂಗ್ರಹವೂ ಆಗುತ್ತದೆ ಎಂದು ಸತೀಶ್ ಆಚಾರ್ಯ ಹೇಳಿದರು.
ಪ್ರಸ್ತುತ 3ಎಯಲ್ಲಿ ಪರವಾನಿಗೆಯನ್ನು ಪಡೆಯಲು ನಮ್ಮ ಪಟ್ಟಾ ಜಮೀನಾಗಿದ್ದರೂ ಕಂದಾಯ ಮತ್ತು ಕೃಷಿ ಇಲಾಖೆಯಿಂದ ನಿರಕ್ಷೇಪಣಾ ಪತ್ರವನ್ನು ಪಡೆಯಬೇಕಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸ್ಥಳದಲ್ಲಿರುವ ಮಣ್ಣನ್ನು ತೆಗೆದು ಐಎಲ್‌ಎಂಸ್ ಪರೀಕ್ಷೆ ಮಾಡಿದ ನಂತರವೇ ಅನುಮೋದನೆ ನೀಡುತ್ತಾರೆ. ಆದರೆ ಕರಾವಳಿ ಭಾಗದ ಅನೇಕ ಸ್ಥಳಗಳಿಂದ ಮಣ್ಣನ್ನು ಪರೀಕ್ಷೆ ಮಾಡಿದಾಗ ಇದರಲ್ಲಿ ಶೇ.20ಕ್ಕಿತ ಜಾಸ್ತಿ ಯಾವುದೇ ಖನಿಜಾಂಶಗಳು ಇರುವುದು ಕಂಡುಬಂದಿಲ್ಲ. ಆದರೂ, ಮಣ್ಣು ಪರೀಕ್ಷೆ ಮಾಡದೆ ನಮಗೆ ಪರವಾನಿಗೆ ನೀಡುವುದಿಲ್ಲ. ಭೂಮಿಯ ಮೇಲ್ಪದರದ ಮುರ ಇಟ್ಟಿಗೆಯು ಈ ಹಿಂದಿನ ದಾಖಲೆಗಳಲ್ಲಿ ಭೂ ಮತ್ತು ಗಣಿ ಇಲಾಖೆಯ ಇಲಾಖೆಗೆ ಸೇರಿಲ್ಲದಿದ್ದರೂ ಈಗ ಇದನ್ನು ಗಣಿ ಇಲಾಖೆಗೆ ಸೇರಿಸಲಾಗಿದೆ. 3ಎ ಅನುಮತಿಯನುಸಾರ ನಾವು 1 ಟನ್‌ಗೆ ಶೇ.96ರಷ್ಟು ತೆರಿಗೆಯನ್ನು ಮುರ ತೆಗೆಯುವ ಮೊದಲೇ ಪಾವತಿಸಬೇಕೆಂದು ನಿಯಮ ಇದೆ. ಮುರವನ್ನು ತೆಗೆಯುವ ಮೊದಲೇ ಟನ್‌ಗೆ ಶೇ.96ರಷ್ಟು ತೆರಿಗೆಯನ್ನು ಪಾವತಿಸಿದ ನಂತರ ಉತ್ತಮವಾದ ರೀತಿಯ ಮುರ ಇಟ್ಟಿಗೆ ಭೂಮಿಯಿಂದ ದೊರೆಯದಿದ್ದಲ್ಲಿ ನಾವು ನಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಪರವಾನಿಗೆ ನೀಡಲು ಮೊದಲ ಹಂತದಲ್ಲಿ 6 ತಿಂಗಳು, ನಂತರ ನವೀಕರಣ ಮಾಡಿದಾಗ 6 ತಿಂಗಳು ಎಂದು ಸಮಯ ನಿಗದಿಪಡಿಸಿ ತಾತ್ಕಾಲಿಕ ಪರವಾನಿಗೆ ನೀಡುತ್ತಾರೆ. ಆದರೆ, ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ಮಳೆಗಾಲದಲ್ಲಿ ಗುಡ್ಡಗಾಡು ಪ್ರದೇಶವಾದ ಕಾರಣ ಮುರ ಇಟ್ಟಿಗೆ ಸಾಗಿಸುವ ವಾಹನದ ಸಂಚಾರಕ್ಕೆ ಅನಾನುಕೂಲವಾದಾಗ ಕೆಲಸ ಕಾರ್ಯವನ್ನು ನಿರ್ವಹಿಸಲು ಕಷ್ಟಕರ. ಈ ಹಿನ್ನೆಲೆಯಲ್ಲಿ ಪರವಾನಿಗೆಯ ಸಮಯವನ್ನು 2 ವರ್ಷದವರೆಗೆ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರು, ಕೋಶಾಧಿಕಾರಿ ರಾಮ ಮುಗ್ರೋಡಿ, ಬಂಟ್ವಾಳ ಅಧ್ಯಕ್ಷ ಮೋಹನ್ ಶೆಟ್ಟಿ, ವಿಟ್ಲ ಅಧ್ಯಕ್ಷ ಸುಧೀರ್, ರವಿ ಉಪಸ್ಥಿತರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝