ಚೆನ್ನೈ: ಬರೋಬ್ಬರಿ 70 ಲಕ್ಷ ರೂ. ಮೌಲ್ಯದ ವೊಲ್ವೋ ಕಾರು, 800 ಗ್ರಾಂ ಚಿನ್ನ ವರದಕ್ಷಿಣೆಯಾಗಿ ನೀಡಿದರೂ ಸಾಕಗದೆ ಮತ್ತೆ ಹಣ, ಚಿನ್ನಕ್ಕಾಗಿ ನೀಡಿದ ಕಿರುಕುಳದಿಂದ ಬೇಸತ್ತ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದಿದೆ. ʻಕೊನೆಯ ಉಸಿರಿನವರೆಗೂ ನೀನೇ ನನ್ನ ಭರವಸೆಯಾಗಿದ್ದೆ ಅಪ್ಪʼ ಎಂದೆಲ್ಲಾ ಮಗಳು ತಂದೆಗೆ ಕಳಿಸಿದ ಲಾಸ್ಟ್ ವಾಯ್ಸ್ ಮೆಸೇಜ್ ಮನಕಲಕುವಂತಿದೆ.
ಕಳೆದ ಏಪ್ರಿಲ್‌ನಲ್ಲಿ ರಿಧನ್ಯಾ ಹಾಗೂ ಕವಿನ್ ಕುಮಾರ್ (28) ಮದುವೆಯಾಗಿದ್ದರು. ಭಾನುವಾರದಂದು ರಿಧನ್ಯಾ ಮೊಂಡಿಪಾಳ್ಯಂದಲ್ಲಿರುವ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ, ಮನೆಯಿಂದ ಹೊರಟಿದ್ದರು. ಬಳಿಕ ಮಾರ್ಗಮಧ್ಯೆ ಕಾರು ನಿಲ್ಲಿಸಿ, ಕೀಟನಾಶ ಸೇವಿಸಿದ್ದಾರೆ. ಬಹಳ ಹೊತ್ತಿನಿಂದ ಒಂದೇ ಪ್ರದೇಶದಲ್ಲಿ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. ಜೊತೆಗೆ ಬಾಯಿಯಲ್ಲಿ ನೊರೆ ಬಂದಿರುವುದನ್ನು ಕಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೂಲಗಳ ಪ್ರಕಾರ, ರಿಧನ್ಯಾ ಸಾಯುವ ಮುನ್ನ ತನ್ನ ತಂದೆಗೆ ವಾಟ್ಸಾಪ್‌ನಲ್ಲಿ ಏಳು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿದ್ದರು, ಮೆಸೇಜ್‌ನಲ್ಲಿ, ʻನನ್ನ ಈ ನಿರ್ಧಾರಕ್ಕಾಗಿ ಕ್ಷಮಿಸಿ, ಪ್ರತಿದಿನ ನನ್ನ ಪತಿ, ಅತ್ತೆ ಹಾಗೂ ಮಾವ ನೀಡುತ್ತಿರುವ ಕಿರುಕುಳ ತಾಳಲಾಗದೇ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಇದೆಲ್ಲದರ ಬಗ್ಗೆ ಯಾರಿಗಾದರೂ ಹೇಳೋಣ ಎಂದರೆ, ಜೀವನವೆಂದರೆ ಹೀಗೆ ಇರುತ್ತೆ, ನೀನೇ ಎಲ್ಲದಕ್ಕೂ ಹೊಂದಿಕೊಂಡು ಹೋಗಬೇಕು ಎಂದು ಹೇಳುತ್ತಾರೆ. ಆದರೆ ನನ್ನ ನೋವು ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ನಾನು ನಿಮಗೆ ಸುಳ್ಳು ಹೇಳುತ್ತಿದ್ದೇನೆ ಎನ್ನಿಸಬಹುದು, ಆದರೆ ಇದು ಸುಳ್ಳಲ್ಲ. ಎಲ್ಲರೂ ನಾಟಕವಾಡುತ್ತಿದ್ದಾರೆ, ಅದಕ್ಕಾಗಿ ನಾನು ಮೌನವಾಗಿದ್ದೇನೆ. ಇದೆಲ್ಲವನ್ನು ನೋಡುತ್ತಾ ನನಗೆ ಬದುಕಲು ಸಾಧ್ಯವಿಲ್ಲ ಅಪ್ಪʼ ಎಂದು ಹೇಳಿದ್ದಾರೆ.
ʻಈ ನರಕವನ್ನು ಬಿಟ್ಟು ನಿಮ್ಮ ಬಳಿ ಬರಬೇಕೆಂದರೆ, ಜೀವನಪೂರ್ತಿ ನಿಮಗೆ ಹೊರೆಯಾಗಿ ಬದುಕಲು ನನಗೆ ಇಷ್ಟವಿಲ್ಲ. ನನ್ನ ಪತಿ ದೈಹಿಕವಾಗಿ ಕಿರುಕುಳ ನೀಡಿದರೆ, ಅತ್ತೆ, ಮಾವ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಾನು ಯಾವ ತಪ್ಪು ಮಾಡಿಲ್ಲ. ಈ ಜೀವನ ನನಗೆ ಬೇಡ ಅಪ್ಪ. ಇದೇ ರೀತಿ ಈ ನರಕದಲ್ಲಿ ನನಗೆ ಬದುಕಲು ಆಗುವುದಿಲ್ಲ. ಆದರೆ ನೀನು ಮತ್ತು ಅಮ್ಮ ನನ್ನ ಪ್ರಪಂಚ. ಕೊನೆಯ ಉಸಿರಿನವರೆಗೂ ನೀನೇ ನನ್ನ ಭರವಸೆಯಾಗಿದ್ದೆ, ನನ್ನಿಂದ ನಿನಗೆ ತುಂಬಾ ನೋವಾಗಿದೆ. ನೀನು ಅದನ್ನು ಹೇಳುವುದಿಲ್ಲ. ಆದರೆ ನನ್ನನ್ನು ಈ ಸ್ಥಿತಿಯಲ್ಲಿ ನಿನಗೆ ನೋಡಲು ಸಾಧ್ಯವಾಗುವುದಿಲ್ಲ. ನಿಮ್ಮ ನೋವು ನನಗೆ ಅರ್ಥವಾಗುತ್ತೆ. ಕ್ಷಮಿಸಿ ಅಪ್ಪಾ, ಎಲ್ಲವೂ ಮುಗಿದಿದೆ. ನಾನು ಹೋಗುತ್ತಿದ್ದೇನೆʼ ಎಂದು ತಿಳಿಸಿದ್ದಾರೆ.
ಸದ್ಯ ರಿಧನ್ಯಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿಯನ್ನು ಬಂಧಿಸಿ, ವಿಚಾಣೆ ನಡೆಸುತ್ತಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝