ಮಂಗಳೂರು: ಸುತ್ತ ದಟ್ಟ ಕಾಡಿನಿಂದ ಸುತ್ತುವರೆದು, ಮನುಷ್ಯ ಮತ್ತು ಕಾಡಿನ ನಡುವಿನ ಅವಿನಾಭಾವ ಸಂಬಂಧ ಹೊಂದಿರುವ ಸಣ್ಣ ಊರೊಂದರಲ್ಲಿ ನಡೆಯುವ ನಿಜವಾದ ಘಟನೆಯನ್ನು ಆಧರಿಸಿ ನಿರ್ಮಿಸಿರುವ ‘ಜಂಗಲ್ ಮಂಗಲ್’ ಇದೇ ಜುಲೈ 4ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ರಕ್ಷಿತ್ ಕುಮಾರ್ ತಿಳಿಸಿದರು.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಚಿತ್ರದ ಬಗ್ಗೆ ಅವರು ಮಾಹಿತಿ ನೀಡಿದರು. ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಸಣ್ಣ ಹಳ್ಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಕಾಡಿನಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆದಿದೆ. ಹೆಚ್ಚಾಗಿ ಕರಾವಳಿಯ ಕಲಾವಿದರನ್ನು ಸೇರಿಸಿ ನಿರ್ಮಿಸಲಾಗಿದೆ ಎಂದರು.
ಚಿತ್ರದ ನಾಯಕ ನಟ ಯಶ್ ಶೆಟ್ಟಿ ಮಾತಾಡಿ, ಈ ಚಿತ್ರದಲ್ಲಿ ನನ್ನದು ಸಪೋರ್ಟಿವ್ ನಟನೆಯಾಗಿದ್ದು, ನಿಜವಾಗಿಯೂ ಇದರಲ್ಲಿ ಕಥೆ ಹಾಗೂ ನಿರ್ದೇಶಕರೇ ಹೀರೋ. ಚಿತ್ರದ ಕಥೆಯನ್ನು ಸಿಂಪಲ್ ಸುನಿ ಅವರು ಮೆಚ್ಚಿ ಅವರ ಅವರ ಬ್ಯಾನರ್ ನಲ್ಲಿ ಅವಕಾಶ ಕೊಟ್ಟರು ಎಂದರು.
ಪೋಷಕ ನಟ ಚಂದ್ರಹಾಸ್ ಉಳ್ಳಾಲ್ ಮಾತನಾಡಿ, ಕರಾವಳಿಯ ಸಿದ್ಧಸೂತ್ರ ಬಿಟ್ಟು ಹೊಸ ಚಿತ್ರ ಬರ್ತಾ ಇದ್ದು ಅದರಲ್ಲಿ ಜಂಗಲ್ ಮಂಗಲ್ ಕೂಡಾ ಒಂದು. ಕಾಡು ತನ್ನ ನಿಗೂಢತೆ ಎಂದೂ ಬಿಟ್ಟು ಬಿಡುವುದಿಲ್ಲ. ಆದರೆ ಕಾಡು ಪ್ರೀತಿಯನ್ನು ಅಪ್ಪುತ್ತದೆ ಎಂದು ತೋರಿಸುವ ಕಾಡಿನ ನಿಗೂಢತೆ ಈ ಚಿತ್ರದಲ್ಲಿ ಇದೆ ಎಂದರು.
ಹಾಸ್ಯ ನಟ ಪುಷ್ಪರಾಜ್ ಬೊಳ್ಳಾರ್ ಮಾತನಾಡಿ, ಶೂಟಿಂಗ್ ಸಮಯ ನಿರ್ದೇಶಕ ರಕ್ಷಿತ್ ಭಯಪಟ್ಟಿದ್ದರು. ಆದರೆ ಟ್ರೈಲರ್ ಬಂದ ಮೇಲೆ ಲವಲವಿಕೆಯಿಂದ ಇದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಎಲ್ಲರೂ ಗೆಲ್ಲಿಸಿ ಎಂದರು. ನಾಯಕಿ ಹರ್ಷಿತಾ ಮಾತನಾಡಿ, ಶೂಟಿಂಗ್ ನಿಮಿತ್ತ ಬೆಂಗಳೂರಿನಿಂದ ಬಂದೆ, ಇದೀಗ ನಾನು ಮಂಗಳೂರಿನವಳೇ ಆಗಿದ್ದೇನೆ. ಹಸಿರಿನ ಕಾನನದಲ್ಲಿ ಚಿತ್ರೀಕರಿಸಿದ ನೈಜತೆಗೆ ತೀರಾ ಹತ್ತಿರವಾದ ಸಿನಿಮಾ ಇದು ಎಂದರು.
ಸಿನಿಮಾ ಕುರಿತು:
ಸುನಿ ಸಿನಿಮಾಸ್ (ಸಿಂಪಲ್ ಸುನಿ) ಅರ್ಪಿಸುವ ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ಚಿತ್ರ ತಯಾರಾಗಿದೆ. ರಕ್ಷಿತ್ ಕುಮಾರ್ ಸಿನಿಮಾವನ್ನು ನಿರ್ದೇಶಿಸಿದ್ದು ತಾರಾಗಣದಲ್ಲಿ ಯಶ್ ಶೆಟ್ಟಿ, ಉಗ್ರಂ ಮಂಜು, ಹರ್ಷಿತಾ ರಾಮಚಂದ್ರ, ಬಲ ರಾಜವಾಡಿ, ದೀಪಕ್ ರೈ ಪಾಣಾಜೆ ಚಂದ್ರಹಾಸ್ ಉಳ್ಳಾಲ್ ಅಭಿನಯಿಸಿದ್ದಾರೆ.
ಛಾಯಾಗ್ರಹಣ: ವಿಷ್ಣುಪ್ರಸಾದ್, ಸಂಗೀತ: ಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ತೇಜಸ್ವಿ, ಸಂಕಲನ: ಮನು ಶೇಡ್ಗಾರ್, ಕಲಾ ನಿರ್ದೇಶನ: ವರದರಾಜ್ ಕಾಮತ್.
ಪೂರ್ತಿಯಾಗಿ ಸುಳ್ಯ ತಾಲೂಕಿನ ಗುತ್ತಿಗಾರು ಬಳಿಯ ಮಡಪ್ಪಾಡಿ ಎಂಬಲ್ಲಿ ಸತತ 30 ದಿನಗಳ ಚಿತ್ರೀಕರಣ ನಡೆದಿದೆ. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್ ಚಂದ್ರಹಾಸ್ ಉಳ್ಳಾಲ್ ಇತ್ಯಾದಿ ಕರಾವಳಿಯ ಹಲವು ಪ್ರತಿಭಾನ್ವಿತ ನಟರ ಜೊತೆಗೆ ಚಿತ್ರೀಕರಣ ನಡೆದ ಮಡಪ್ಪಾಡಿಯ ಒಂದಷ್ಟು ಗ್ರಾಮಸ್ಥರು ಕೂಡ ನಟಿಸಿರುವುದು ವಿಶೇಷ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj