ಮಂಗಳೂರು: ಬಜ್ಪೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ, ಹಾಗೂ ಕುಡುಪುವಿನ ಅಶ್ರಫ್ ಗುಂಪು ಹತ್ಯೆ ಪ್ರಕರಣದ ಕುರಿತಂತೆ ಪೊಲೀಸರು ವೈಜ್ಞಾನಿಕ ಸಾಕ್ಷ್ಯಾಧಾರದಿಂದಲೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಕೆಲವರು ಅವರನ್ನು ಯಾಕೆ ಬಂಧಿಸಿಲ್ಲ, ಇವರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ನಿಮ್ಮಲ್ಲಿ ಸ್ಪಷ್ಟ ಮಾಹಿತಿ ಇದ್ದರೆ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಿ. ಸೋಷಿಯಲ್ ಮೀಡಿಯಾದಲ್ಲಿ ಊಹಾಪೋಹಾ ಹರಡಬೇಡಿ. ಎಂದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಹೇಳಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಹಾಗೂ ಕುಡುಪುವಿನಲ್ಲಿ ನಡೆದ ಅಶ್ರಫ್ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ನಡೆಸಿರುವ ತನಿಖೆಯ ಸಮಗ್ರ ವಿವರ ನೀಡಿದರು.
ಸುಹಾಸ್ ಶೆಟ್ಟಿ ಪ್ರಕರಣ ಸದ್ಯ ಎನ್‌ಐಎಗೆ ವಹಿಸಲಾಗಿದ್ದು, ಅಶ್ರಫ್ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ೧೦೦ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅನುಮಾನ, ಸಂಶಯ ಬೇಡ. ಪೊಲೀಸರ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದು ಬಿಟ್ಟು, ಸಾಕ್ಷ್ಯಾಧಾರಗಳಿದ್ದಲ್ಲಿ ನೇರವಾಗಿ ನಮಗೆ ತಂದು ಕೊಡಿ. ಆದರೆ ತನಿಖೆಗೆ ದಿಕ್ಕು ತಪ್ಪಿಸುವ ರೀತಿಯಲ್ಲಿ, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆದರೆ ಅವರು ಕೂಡಾ ಕಾನೂನಿನ ಪ್ರಕಾರ ಆರೋಪಿಗಳಾಗುತ್ತಾರೆ. ಅಮಾಯಕರಿಗೆ ಸಮಸ್ಯೆ ಆಗದಂತೆ ನಾವು ನೀಡುತ್ತೇವೆ. ಆದರೆ ತಪ್ಪಿತಸ್ಥರನ್ನು ಬಿಡಲಾಗದು ಎಂದು ಕಮಿಷನರ್ ಸ್ಪಷ್ಟಪಡಿಸಿದರು.
ಸುಹಾಸ್ ಶೆಟ್ಟಿ ಕೊಲೆ ಘಟನೆ ನಡೆದಾಗ ಎರಡು ಕಡೆ ಅಪಘಾತಗಳಾಗಿದ್ದವು. ಮೊದಲೊಂದು ಅಪಘಾತವಾದ ಸಂದರ್ಭದಲ್ಲಿ ಅದನ್ನು ನೋಡಲು ಜನರು ಸೇರಿದ್ದರು. ಅದೇ ಸಂದರ್ಭದಲ್ಲಿ ಪಕ್ಕದಲ್ಲಿ ಸುಹಾಸ್ ಶೆಟ್ಟಿ ಕಾರಿಗೆ ತಾಗಿಸಿ ಕೊಲೆ ಕೃತ್ಯ ಮಾಡಲಾಗಿತ್ತು. ಅದರ ಮಾತ್ರಕ್ಕೆ ಅಲ್ಲಿ ಸೇರಿದ್ದವರೆಲ್ಲ ಸುಹಾಸ್ ಶೆಟ್ಟಿ ಕೊಲೆ ಕೃತ್ಯಕ್ಕಾಗಿ ಸೇರಿದವರು ಅಂತ ಭಾವಿಸುವುದು ತಪ್ಪಾಗುತ್ತದೆ. ಕೊಲೆ ಕೃತ್ಯದ ಸಂದರ್ಭದಲ್ಲಿ ಅಲ್ಲಿದ್ದ ಬುರ್ಖಾ ಧರಿಸಿದವರಿದ್ದರನ್ನು ಯಾಕೆ ಬಂಧಿಸಿಲ್ಲ ಎನ್ನುವ ಪ್ರಶ್ನೆಯೂ ಬಂದಿದೆ. ನಾವು ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುತ್ತಿದ್ದೇವೆ, ಆ ಜಾಗದಲ್ಲಿ ಅದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ನಡೆದ ಘಟನೆಯ ವೇಳೆ ನಡೆದಿದ್ದ ಅಪಘಾತ ಪ್ರಕರಣ ವೀಕ್ಷಿಸಲು ಕುತೂಹಲದಿಂದ ಸೇರಿದ್ದವರು, ಸುಹಾಸ್ ಶೆಟ್ಟಿಯನ್ನು ಫಾಲೋ ಮಾಡಿಕೊಂಡು ಬಂದ ವಾಹನ ಸೇರಿದಂತೆ ಎಲ್ಲಾ ರೀತಿಯ ಸಾಕ್ಷ್ಯಗಳನ್ನು ಪರಿಗಣಿಸಿ, ವಿಚಾರಣೆಗೊಳಪಡಿಸಲಾಗಿದೆ. ಅನುಮಾನಗಳ ಬಗ್ಗೆಯೂ ಸಂಬಂಧಪಟ್ಟವರಿಗೆ ವೀಡಿಯೋ ದಾಖಲೆಗಳ ಮೂಲಕ ಮಾಹಿತಿ ಒದಗಿಸಲಾಗಿದೆ ಎಂದರು.
ಅಶ್ರಫ್ ಕೊಲೆ ಪ್ರಕರಣದ ಮಾಹಿತಿ ನೀಡಿದ ಕಮಿಷನರ್ ಸುಧೀರ್ ರೆಡ್ಡಿ, ಪೊಲೀಸರಿಗೆ ಪ್ರಾಥಮಿಕವಾಗಿ ದೊರಕಿದ ಮೃತದೇಹದ ಫೋಟೋದ ಬಳಿ ಇದ್ದ ಆರೋಪಿಗಳ ಚಪ್ಪಲಿ ಹಾಗೂ ಶೂಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ನಡೆದಿದೆ. ಮೃತಪಟ್ಟ ವ್ಯಕ್ತಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ದೂರದಲ್ಲಿ ಕ್ರಿಕೆಟ್ ಆಟ ನಡೆಯುತ್ತಿತ್ತು. ಆದರೆ ಅಲ್ಲಿ ಸೇರಿದ್ದವರನ್ನು ಆರೋಪಿಗಳೆಂದು ಪರಿಗಣಿಸಲು ಆಗುವುದಿಲ್ಲ. ಪ್ರಮುಖ ಆರೋಪಿಗಳ ಹೇಳಿಕೆಯ ಆಧಾರದಲ್ಲಿ ತನಿಖೆ ಆಗಿದೆ. ಆರಂಭದಲ್ಲಿ ಪೊಲೀಸರಿಂದ ಆಗಿರುವ ಲೋಪಕ್ಕೆ ಸಂಬಂಧಿಸಿ ಪೊಲೀಸರ ಮೇಲೂ ಕ್ರಮ ಆಗಿದೆ. ಹಾಗಿದ್ದರೂ ಪ್ರಕರಣವನ್ನು ಸಂಪೂರ್ಣವಾಗಿ ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿಯೇ ತನಿಖೆ ನಡೆದಿದೆ. ನಾನು ಇನ್ನೂ ಎರಡು ದಿನ ಕಚೇರಿಯಲ್ಲೇ ಇರುತ್ತೇನೆ. ಯಾರೇ ಈ ಪ್ರಕರಣದ ಬಗ್ಗೆ ಸಾಕ್ಷ್ಯ ಇದ್ದರೆ ತಂದು ಒದಗಿಸಿ ಎಂದರು.
ಅಶ್ರಫ್ ಕೊಲೆ ಪ್ರಕರಣದಲ್ಲಿ ಕಾರ್ಪೊರೇಟರ್ ಒಬ್ಬರ ಪತಿ ಶಾಮೀಲಾಗಿದ್ದರು ಎಂದು ಕೆಲವರು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಅವರನ್ನು ಕರೆದು ಸಾಕ್ಷ್ಯಗಳಿದ್ದರೆ ಒಪ್ಪಿಸಿ ಎಂದರೆ ಅವರಲ್ಲಿ ಇಲ್ಲ. ಪೊಲೀಸರ ಬಗ್ಗೆ ಸಂಶಯಪಟ್ಟು ಪೋಸ್ಟ್ ಗಳನ್ನು ಹಾಕುತ್ತಾರೆ, ಸಾಕ್ಷ್ಯ ಏನಾದ್ರೂ ಇದೆಯಾ ಎಂದು ಕೇಳಿದರೆ ಪೊಲೀಸರು ಕಿರುಕುಳ ಕೊಟ್ಟರು ಅಂತ ಆರೋಪಿಸುತ್ತಾರೆ. ಪೊಲೀಸರ ಕೆಲಸವನ್ನು ನೀವು ಮಾಡುವುದಾದರೆ ನಾವು ಯಾಕಿರೋದು. ನೀವು ಪೊಲೀಸ್ ಕೆಲಸ ಮಾಡುವುದು ಬೇಡ. ಯಾರೇ ಆರೋಪಿಗಳಿದ್ದರೂ ಬಂಧನ ಮಾಡುತ್ತೇವೆ, ನೀವು ಸಾಕ್ಷ್ಯ ತಂದುಕೊಡಿ. ನಾವು ಪ್ರಕರಣದಲ್ಲಿ 110 ಮಂದಿಯನ್ನು ವಿಚಾರಣೆ ಮಾಡಿದ್ದೇವೆ.
ಯಾವುದೇ ರೀತಿಯ ಸಾಕ್ಷ್ಯವಿಲ್ಲದೆ ಪೊಲೀಸರ ಕಾರ್ಯಾಚರಣೆ ಬಗ್ಗೆ ಆಕ್ಷೇಪ, ಅನುಮಾನ ವ್ಯಕ್ತಪಡಿಸಿದಾಗ ನೋಟೀಸು ನೀಡಿ ವಿಚಾರಣೆ ನಡೆಸಲಾಗುತ್ತದೆ. ಸಾಕ್ಷ್ಯ ಇದ್ದಲ್ಲಿ ನೀಡಬೇಕು. ಅದು ಬಿಟ್ಟು ಯಾವುದೋ ಅನುಮಾನದಲ್ಲಿ ಹೇಳಿದರೆ ಕಾನೂನಿನಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ. ಮಂಗಳೂರಿನ ಎಲ್ಲ ನಾಗರಿಕರ ಸುರಕ್ಷತೆಯನ್ನು ಕಾಪಾಡುವ ಜತೆಗೆ ನ್ಯಾಯ ಒದಗಿಸುವುದು ಪೊಲೀಸರಾದ ನಮ್ಮ ಕರ್ತವ್ಯ ಎಂದರು.
ದ್ವೇಷ ಭಾಷಣ ಮಾಡುವವರಿಗೆ ಸುಲಭವಾಗಿ ಜಾಮೀನು ದೊರೆಯುತ್ತದೆ ಎಂಬ ಅನುಮಾನ, ಆತಂಕ ಸಾರ್ವಜನಿಕರಿಗೆ ಬೇಡ. ದ್ವೇಷ ಭಾಷಣ ಮಾಡುವ ಸ್ಟೇಜ್‌ನಿಂದಲೇ ಅಂತಹವರನ್ನು ಎಳೆದುಕೊಂಡರು ಬರಲು ಪೊಲೀಸರಿಗೆ ಯಾವುದೇ ಸಮಸ್ಯೆ ಇಲ್ಲ. ಎಂದು ಕಮಿಷನರ್ ಸುಧೀರ್ ರೆಡ್ಡಿ ಹೇಳಿದರು.