ಮಂಗಳೂರು: ಸೌಜನ್ಯ ಪರ ಹೋರಾಟಗಾರ್ತಿ ಸಂಧ್ಯಾ ಪವಿತ್ರ ನಾಗರಾಜ್ ಎಂಬವರ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೇಶ್ ಎಂಬವರ ಮೇಲೆ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಗೆಹರಿಸುವುದಾಗಿ ಹೇಳಿ ಹಣ ಪಡೆದಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಾಜೇಶ್ ಗಾಯಕರಾಗಿದ್ದು 2024ರಲ್ಲಿ ಫೇಸ್ಬುಕ್ ಮೂಲಕ ಸಂಧ್ಯಾ ಪರಿಚಯವಾಗಿತ್ತು. ಸೌಜನ್ಯ ಹೆಲ್ಪ್ಲೈನ್ ಹೆಸರಿನಲ್ಲಿ ವಂಚನೆಗೊಳಗಾದವರಿಗೆ ನೆರವು ನೆರವಾಗುವುದಾಗಿ ಸಂಧ್ಯಾ ಹೇಳಿದ್ದರು. ಇದನ್ನು ನಂಬಿದ ರಾಜೇಶ್ ತಮ್ಮ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಹೇಳಿದ್ದರು. ಇದಕ್ಕಾಗಿ ರಾಜೇಶ್ ಅವರಿಂದ ಸಂಧ್ಯಾ ಹಂತಹಂತವಾಗಿ 3.20 ಲಕ್ಷ ರೂ. ಪಡೆದಿದ್ದು ಕೊನೆಗೆ ಪ್ರಕರಣ ಬಗೆಹಗರಿಯದ ಕಾರಣ ಪ್ರಶ್ನಿಸಿದಾಗ ಹೆಚ್ಚಿನ ಹಣ ನೀಡುವಂತೆ ಸಂಧ್ಯಾ ಹೇಳಿದ್ದು ರಾಜೇಶ್ ಒಪ್ಪದೇ ಇದ್ದಾಗ ಬೆದರಿಕೆ ನೀಡಿದ್ದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.