ಫರಿದಾಬಾದ್: ಹರಿಯಾಣದ ಫರಿದಾಬಾದ್‌ನ ವಸತಿ ಬೀದಿಯೊಂದರಲ್ಲಿ ಶುಕ್ರವಾರ ಡ್ರಿಲ್ಲಿಂಗ್ ಮಿಶೀನಿನಿಂದ 10 ಅಡಿ ಆಳದ ಕಂದಕ ಕೊರೆದು ಮಹಿಳೆಯೋರ್ವರ ಕೊಳೆತ ಶವವನ್ನು ಮೇಲೆತ್ತಲಾಗಿದೆ. ಈ ಶವ ಉತ್ತರ ಪ್ರದೇಶದ ಶಿಕೋಹಾಬಾದ್ ನಿವಾಸಿ 24 ವರ್ಷದ ತನು ಎಂಬವಳದ್ದು ಎಂದು ಗುರುತಿಸಲಾಗಿದೆ.
ಈಕೆ ಎರಡು ವರ್ಷಗಳ ಮುಂಚೆ ಫರಿದಾಬಾದ್‌ನ ರೋಷನ್ ನಗರದ ನಿವಾಸಿ ಅರುಣ್ ಎಂಬಾತನನ್ನು ಮದುವೆಯಾಗಿದ್ದಳು. ಇದೀಗ ತನುವಿನ ಪತಿ, ಮಾವ, ಅತ್ತೆ ಮತ್ತು ಇನ್ನೊಬ್ಬ ನಿಕಟ ಸಂಬಂಧಿಯೋರ್ವನನ್ನು ಬಂಧಿಸಲಾಗಿದೆ.
ತನುವನ್ನು ಪತಿ ಮನೆಯ ಪಕ್ಕದಲ್ಲಿರುವ ಪಬ್ಲಿಕ್ ಲೇನ್‌ನ ಹೊಸದಾಗಿ ಹಾಕಿದ ಕಾಂಕ್ರೀಟ್ ಅಡಿಯಲ್ಲಿ ಶವವನ್ನು ಹೂತುಹಾಕಲಾಗಿತ್ತು. ತ್ಯಾಜ್ಯ ನೀರು ಸರಬರಾಜು ಮಾಡಲು ಚರಂಡಿ ನಿರ್ಮಾಣಕ್ಕಾಗಿ ಸುಮಾರು ಎರಡು ತಿಂಗಳ ಹಿಂದೆ ಈ ಪ್ರದೇಶವನ್ನು ಅಗೆಯಲಾಗಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಶವವನ್ನು ಹೊರತೆಗೆದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ತನು ಸಹೋದರಿ ಪ್ರೀರಿ ಹೇಳಿಕೆ ನೀಡಿ, 2023 ರಲ್ಲಿ ನನ್ನ ಸಹೋದರಿಗೆ ಮದುವೆಯಾಗಿದ್ದು, ಈಕೆಗೆ ಗಂಡನ ಮನೆಯಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾಳೆ. ಮದುವೆಯಾದ ಕೂಡಲೇ ಅರುಣ್ ಮತ್ತು ಅವನ ಪೋಷಕರು ಚಿನ್ನಾಭರಣ ಮತ್ತು ಹಣದ ಬೇಡಿಕೆ ಇಟ್ಟಿದ್ದರು. ನಮ್ಮ ಕುಟುಂಬವು ಅವರ ಸಾಧ್ಯವಾದಷ್ಟು ಬೇಡಿಕೆಗಳನ್ನು ಪೂರೈಸಿತು. ಆದರೆ ಪದೇ ಪದೇ ಒತ್ತಡ ಹೇರಲಾಯಿತು ಎಂದು ಪ್ರೀತಿ ಹೇಳಿದ್ದಾಳೆ.
ತನು ಮದುವೆಯಾದ ಕೆಲವೇ ತಿಂಗಳಲ್ಲಿ ಅಲ್ಲಿ ವಾಸಿಸಲು ಸಾಧ್ಯವಾಗದೆ ತವರಿಗೆ ಮರಳಿದಳು. ಅವಳಿಗೆ ಅಸೌಖ್ಯವಾದಾಗ ಚಿಕಿತ್ಸೆಯನ್ನೂ ನೀಡಲಿಲ್ಲ. ಅವಳು ಒಂದು ವರ್ಷಕ್ಕೂ ಹೆಚ್ಚು ಕಾಲ ನಮ್ಮೊಂದಿಗೆಯೇ ಇದ್ದಳು. ನಾವು ಅಂತಿಮವಾಗಿ ಅವಳನ್ನು ವಾಪಸ್ ಗಂಡನ ಮನೆಗೆ ಕಳುಹಿಸಿದಾಗ, ಚಿತ್ರಹಿಂಸೆ ಮತ್ತೆ ಆರಂಭವಾಯಿತು. ಅವಳಿಗೆ ನಮ್ಮೊಂದಿಗೆ ಮಾತನಾಡಲು ಫೋನ್ ಮಾಡಲೂ ಬಿಡಲಿಲ್ಲ ಎಂದು ಪ್ರೀತಿ ಆರೋಪಿಸಿದ್ದಾಳೆ.
ಏಪ್ರಿಲ್ 23 ರಂದು, ಅತ್ತೆ-ಮಾವಂದಿರು ತನು ಮನೆಯಿಂದ ಓಡಿಹೋಗಿದ್ದಾಳೆ ಎಂದು ಕುಟುಂಬಕ್ಕೆ ತಿಳಿಸಿದ್ದರು. ಏಪ್ರಿಲ್ 9 ರಂದು ತನ್ನ ಸಹೋದರಿಗೆ ಕರೆ ಮಾಡಿದಾಗ ತಲುಪಿಲ್ಲ. ನಮ್ಮ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದರೈ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರೀತಿ ಆರೋಪಿಸಿದಳು.
ಮತ್ತು ಅವಳನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಅವಳು ಮತ್ತಷ್ಟು ಅನುಮಾನ ವ್ಯಕ್ತಪಡಿಸಿದ್ದಾಳೆ. ನಂತರ ಕುಟುಂಬವು ಪೊಲೀಸರನ್ನು ಸಂಪರ್ಕಿಸಿತು. ವಾರಗಟ್ಟಲೆ ಯಾವುದೇ ಗಂಭೀರ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರೀತಿ ಹೇಳಿಕೊಂಡಿದ್ದಾರೆ.
ತನುವಿನ ಮಾವ ಏಪ್ರಿಲ್‌ನಲ್ಲಿ ಮನೆಗೆ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ ಎಂಬ ಕಾರಣ ನೀಡಿ ಗುಂಡಿ ತೋಡಿದ್ದರು. ಈ ಗುಂಡಿಯನ್ನು ಬೇಗನೆ ಮುಚ್ಚಿ, ಅದರ ಮೇಲೆ ಸಿಮೆಂಟ್ ಸ್ಲ್ಯಾಬ್ ಹಾಕಲಾಗಿತ್ತು ಎಂದು ಸ್ಥಳೀಯರು ಪೊಲೀಸರಿಗೆ ಮತ್ತು ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.
“ನೆರೆಹೊರೆಯಲ್ಲಿರುವ ಎಲ್ಲರೂ ಗುಂಡಿ ತೋಡುತ್ತಿರುವುದನ್ನು ನೋಡಿದ್ದೇವೆ. ಕೇಳಿದಾಗ, ಕೊಳಕು ನೀರು ಹರಿಯಲು ಚರಂಡಿ ತೋಡುತ್ತಿದ್ದೇವೆ ಎಂದು ಹೇಳಿದ್ದರು. ಅದರ ಮರುದಿನ ಸೊಸೆ ತನು ಮತ್ತೆ ಎಂದಿಗೂ ಕಾಣಿಸಲಿಲ್ಲ. ನಮ್ಮಲ್ಲಿ ಕೆಲವರು ಏನೋ ತಪ್ಪಾಗಿದೆ ಎಂದು ಭಾವಿಸಿದ್ದರು, ಆದರೆ ಈ ರೀತಿ ಆಗಿದೆ ಎಂದು ನಮಗೆ ಊಹಿಸಲು ಸಾಧ್ಯವಾಗುತ್ತಿಲ್ಲ” ಎಂದು ನೆರೆಹೊರೆಯವರು ಹೇಳಿದರು.
ಉಪ ಪೊಲೀಸ್ ಆಯುಕ್ತ ಉಷಾ ಕುಂಡು ಮಾಹಿತಿ ನೀಡಿ, ನಮಗೆ ಸುಮಾರು ಒಂದು ವಾರದ ಹಿಂದೆ ಔಪಚಾರಿಕ ದೂರು ಬಂದಿದೆ ಎಂದು ದೃಢಪಡಿಸಿದರು. ಒಂದು ವಾರದ ಹಿಂದೆ ದೂರು ಸ್ವೀಕರಿಸಿದ ನಂತರ, ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಗುಂಡಿಯಿಂದ ಶವವನ್ನು ಮೇಲೆತ್ತಿ ನಾಲ್ವರನ್ನು ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ. ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.