ಬೆಂಗಳೂರು: ಏರ್ ಇಂಡಿಯಾ ವಿಮಾನ ದುರಂತ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿದೆ. ಇದೀಗ ಗೌವ್ಹಾಟಿ-ಚೆನ್ನೈ ಇಂಡಿಗೋ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಿದೆ. ಗೌವ್ಹಾಟಿಯಿಂದ ಹೊರಟ ವಿಮಾನ ಕೆಲ ಹೊತ್ತಿನ ಬಳಿಕ ಪೈಲೆಟ್ ಮೇಡೇ ಮೇಡೇ ಸಂದೇಶ ರವಾನಿಸಿದ್ದಾರೆ. ತಕ್ಷಣ ಅಲರ್ಟ್ ಆದ ಕಂಟ್ರೋಲ್ ರೂಂ ಅಧಿಕಾರಿಗಳು ವಿಮಾನವನ್ನು ಬೆಂಗಳೂರಿಗೆ ಡೈವರ್ಟ್ ಮಾಡಲು ಸೂಚಿಸುತ್ತಿದ್ದಂತೆ ಬೆಂಗಳೂರಿನಲ್ಲಿ ವಿಮಾನ ತುರ್ತು ಭೂಸ್ವರ್ಶ ಮಾಡಿದೆ. ವಿಮಾನದಲ್ಲಿ 168 ಪ್ರಯಾಣಿಕರಿದ್ದರು.
ಒಟ್ಟು 168 ಪ್ರಯಾಣಿಕರನ್ನು ಹೊತ್ತ ಇಂಡಿಗೋ 6E-6764 ವಿಮಾನ ಗೌವ್ಹಾಟಿಯಿಂದ ಸಂಜೆ 4.40ಕ್ಕೆ ಟೇಕ್ ಆಫ್ ಆಗಿತ್ತು. ಸಂಜೆ 7.45ಕ್ಕೆ ವಿಮಾನ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹಾರಾಟದ ನಡುವೆ ವಿಮಾನದಲ್ಲಿ ಇಂಧನ ಖಾಲಿಯಾದ ಅಲರಾಂ ಸೂಚನೆ ಬರಲಾರಂಭಿಸಿತು. ಹಾಗಾಗಿ ಚೆನ್ನೈ ತಲುಪುವುದು ಅಸಾಧ್ಯವಾಗಿತ್ತು. ಇತ್ತ ಕಾಕ್‌ಪಿಟ್‌ನಲ್ಲಿನ ರೆಡ್ ಅಲರ್ಟ್ ಸೂಚನೆ ಬಂದ ಕಾರಣ ವಿಮಾನ ತುರ್ತು ಭೂಸ್ವರ್ಶ ಬಿಟ್ಟರೆ ಬೇರೆ ಮಾರ್ಗ ಇರಲಿಲ್ಲ.
ಹಾಗಾಗಿ ಏರ್ ಕಂಟ್ರೋಲ್ ರೂಂಗೆ ಈ ಮಾಹಿತಿಯನ್ನು ಪೈಲೆಟ್ ರವಾನಿಸಿ ತಕ್ಷಣವೇ ಮೇಡೇ ಸಂದೇಶ ನೀಡಿದ್ದಾನೆ. ಮೇಡೇ ಸಂದೇಶ ಅತ್ಯಂತ ಅಪಾಯಾಕಾರಿ ಅಥವಾ ಯಾವುದೇ ಮಾರ್ಗ ಉಳಿಯದಿದ್ದಾಗ ವಿಮಾನದ ಪೈಲೆಟ್ ನೀಡುವ ಸಂದೇಶವಾಗಿದೆ. ಇತ್ತ ಅಲರ್ಟ್ ಆದ ಬೆಂಗಳೂರು ಕಂಟ್ರೋಲ್ ರೂಂ ಸಿಬ್ಬಂದಿ ಚೆನ್ನೈ ವಾಯುಮಾರ್ಗವನ್ನು ಕ್ಲಿಯರ್ ಮಾಡಿದ್ದು, ತಕ್ಷಣ ಪೈಲಟ್ ವಿಮಾನವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದತ್ತ ತಿರುಗಿಸಿದ್ದಾನೆ.
ಮತ್ತೊಂದು ಆತಂಕಕಾರಿ ವಿಚಾರ ಏನಾಗಿತ್ತದೆಂದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಮಾಡುವಷ್ಟು ಇಂಧನ ಇದೆಯಾ ಇಲ್ಲವಾ ಎನ್ನುವ ಅನುಮಾನವೂ ಇತ್ತು. ಆದರೆ ದೇವರ ದಯೆಯಿಂದ ವಿಮಾನ ಸುರಕ್ಷಿತವಾಗಿ ಬೆಂಗಳೂರಿನಲ್ಲಿ ಇಳಿದಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಲಿದೆ ಅನ್ನೋ ಮಾಹಿತಿ ಸಿಗುತ್ತಿದ್ದಂತೆ ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್, ರಕ್ಷಣಾ ಪಡೆ ಸಿಬ್ಬಂದಿ ಸಜ್ಜಾಗಿದ್ದರು. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದಾರೆ. ಆದರೆ ವಿಮಾನದಲ್ಲಿ ಇಂಧನ ಖಾಲಿಯಾಗಲು ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಇಂಡಿಗೋ ಸಂಸ್ಥೆ ಮಾಹಿತಿ ಬಹಿರಂಗಪಡಿಸಿಲ್ಲ.