ಉಡುಪಿ: ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ಕಳದ ಶ್ರೀಕಾಂತ ಶೆಟ್ಟಿ ಬಾಗಲಕೋಟೆ ಜಿಲ್ಲೆಗೆ ಕಾಲಿಡದಂತೆ 3 ತಿಂಗಳು ನಿರ್ಬಂಧ ವಿಧಿಸಿ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ ಶ್ರೀಕಾಂತ್ ಶೆಟ್ಟಿ ಜೂನ್ 20 ರಿಂದ ಸೆಪ್ಟೆಂಬರ್ 20ರವರೆಗೆ ಬಾಗಲಕೋಟೆ ಜಿಲ್ಲೆಗೆ ಹೋಗುವಂತಿಲ್ಲ.
ಮುಧೋಳ ಶಹರದ ಶಿವಾಜಿ ನಗರದಲ್ಲಿ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮುಧೋಳ ನಗರ ಹಾಗೂ ಗ್ರಾಮೀಣ ಭಾಗದಿಂದ ಸುಮಾರು 10,000 ರಿಂದ 15,000 ಹಿಂದೂ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಶೆಟ್ಟಿ ದಿಕ್ಸೂಚಿ ಭಾಷಣ ಮಾಡುವ ನಿರೀಕ್ಷೆ ಇದ್ದು, ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯರು ಕೂಡಾ ಆಗಮಿಸಲಿದ್ದಾರೆ ಎನ್ನಲಾಗಿದೆ.
ಮುಧೋಳ ಶಹರ ಪ್ರದೇಶವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಶ್ರೀಕಾಂತ್ ಶೆಟ್ಟಿ ಭಾಷಣದಿಂದ ಸಾರ್ವಜನಿಕ ಸಾಮರಸ್ಯ, ಕಾನೂನು ವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಭಾವಿಸಿರುವ ಬಾಗಲಕೋಟೆ ಜಿಲಾಡಳಿತ ಈ ನಿರ್ಬಂಧ ಜಾರಿಗೊಳಿಸಿದೆ ಎಂಬ ಮಾಹಿತಿ ಲಭಿಸಿದೆ.
ಈ ಹಿಂದೆ ಗಣೇಶ ವಿಸರ್ಜನೆ ಸಂದರ್ಭ ಮುಧೋಳದಲ್ಲಿ 28 ಕೋಮು ಪ್ರಕರಣಗಳು ದಾಖಲಾಗಿತ್ತು. ಇದೀಗ ಮುಧೋಳದಲ್ಲಿ ಕೋಮು ಸಾಮರಸ್ಯದ ವಾತಾವರಣ ಉಂಟಾಗಿದೆ. ಆದರೆ ಶ್ರೀಕಾಂತ ಶೆಟ್ಟಿ ಕಾರ್ಕಳ ವಿರುದ್ಧ ಕೋಮು ಪ್ರಚೋದನಕಾರಿ ಭಾಷಣ ಮಾಡಿ ಅವರ ಮೇಲೆ ಪ್ರಕರಣಗಳು ದಾಖಲಾಗಿರುವುದರಿಂದ ಅವರನ್ನು ಬಾಗಲಕೋಟೆ ಜಿಲ್ಲೆಗೆ ಕಾಲಿಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.