ನೂತನ ಡಿಸಿ ಆಫೀಸ್ ಎದುರಲ್ಲೇ ರೋಗ ಹರಡುವ ಬಿಲ್ಡಿಂಗ್!

ಮಂಗಳೂರು: ನಗರದ ಪಡೀಲ್ ನಲ್ಲಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ವಸತಿ ಮತ್ತು ವಾಣಿಜ್ಯ ಸಂಕೀರ್ಣವೊಂದು ಪರಿಸರದಲ್ಲಿ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ದೂರಿದ್ದಾರೆ.


ನೇತಾಜಿ ಕಾಂಪ್ಲೆಕ್ಸ್ ಹೆಸರಿನ ಬಿಲ್ಡಿಂಗ್ ನಲ್ಲಿ ವಸತಿಯ ಜೊತೆ ವಾಣಿಜ್ಯ ಸಂಕೀರ್ಣವು ಇದ್ದು ಗ್ರೌಂಡ್ ಫ್ಲೋರ್ ನಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿ, ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಇಷ್ಟೇ ಅಲ್ಲದೆ ಬಿಲ್ಡಿಂಗ್ ನಿವಾಸಿಗಳು ಕೂಡ ತ್ಯಾಜ್ಯವನ್ನು ಅಲ್ಲಲ್ಲಿ ಎಸೆದು ಪರಿಸರದ ಅಂದಗೆಡಿಸುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಬಿಲ್ಡಿಂಗ್ ಮಾಲಕರಿಗೆ, ಮಹಾನಗರ ಪಾಲಿಕೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.


ಬಿಲ್ಡಿಂಗ್ ಎದುರಲ್ಲಿ ತ್ಯಾಜ್ಯ ರಾಶಿ ಬಿದ್ದು ಮಳೆಗೆ ಕೊಳೆತು ನಾರುತ್ತಿದ್ದು ಅಂಗಡಿ ಮಾಲಕರು ಮೂಗು ಮುಚ್ಚಿ ವ್ಯಾಪಾರ ಮಾಡುವಂತಾಗಿದೆ.

ಮೊದಲೇ ಮಳೆಗಾಲದಲ್ಲಿ ಕಣ್ಣೂರು, ಪಡೀಲ್ ಪರಿಸರದಲ್ಲಿ ಪ್ರತೀ ವರ್ಷ ಮಲೇರಿಯಾ, ಡೆಂಗ್ಯೂ ರೋಗ ವ್ಯಾಪಕವಾಗಿ ಹರಡುತ್ತಿದ್ದು ಬಿಲ್ಡಿಂಗ್ ಮಾಲಕರು, ಸಂಬಂಧಪಟ್ಟ ಮನಪಾ ಅಧಿಕಾರಿಗಳು ಕೂಡಲೇ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನೂ ಡ್ರೀಮ್‌ಡೀಲ್‌ಗೆ ಸೇರಿಲ್ಲವೇ? ಹಾಗಾದರೆ ಇಲ್ಲಿ ಒತ್ತಿ

error: Content is protected !!