ಮಂಗಳೂರು: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತುಳುಭಾಷೆಯಲ್ಲಿ ಚರ್ಚಿಸದಂತೆ ಹಾಗೂ ಕನ್ನಡ ಭಾಷೆಗೆ ಪ್ರಾಮುಖ್ಯ ನೀಡುವಂತೆ ಸಲ್ಲಿಕೆಯಾಗಿದ್ದ ಮನವಿಗೆ ಅನ್ವಯಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ಸುತ್ತೋಲೆಯೊಂದು ಸಾಮಾಜಿಕ ಜಾಲತಾನಗಳಲ್ಲಿ ಭಾರೀ ವೈರಲ್ ಆಗಿದೆ.

ಕಳೆದ ಎಪ್ರಿಲ್ ತಿಂಗಳಲ್ಲಿ ಹೊರಡಿಸಲಾದ ಸುತ್ತೋಲೆಯಲ್ಲಿ, ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಾ ಅಧಿಕಾರಿ ಅವರು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ, ಮಂಗಳೂರು, ಮೂಲ್ಕಿ, ಮೂಡಬಿದ್ರೆ, ಉಳ್ಳಾಲ, ಬಂಟ್ವಾಳ, ಪುತ್ತೂರು, ಕಡಬ, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಿರುವಂತೆ ಆ ಪತ್ರ ಕಂಡು ಬಂದಿದೆ.
ಅಷ್ಟಕ್ಕೂ ಮನವಿ ಮಾಡಿದ್ದು ಯಾರು?
ವೈರಲ್ ಆದ ಪತ್ರ ಸೂಚಿಸಿರುವಂತೆ, ಈ ಮನವಿಯನ್ನು ಯಶಸ್ವಿ ನಾಗರೀಕ ಸೇವಾ ಸಂಘ, ವಾಸುದೇವ ನಗರ ಕಾರ್ಕಳ ಎಂಬ ಸಂಘಟನೆಯ ಸಂಚಾಲಕ ಮರಳೀಧರ ಎಂಬವರು ಇದೇ ವರ್ಷ ಫೆ.12ರಂದು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಮನವಿಯಲ್ಲಿ ಅವರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಯವರು ಮತ್ತು ಜನಪ್ರತಿನಿಧಿಯವರು ಚರ್ಚಿಸುವಾಗ ತುಳು ಭಾಷೆ ಬಳಕೆ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ಮೀಡುವಂತೆ ಉಲ್ಲೇಖ(1)ರಂತೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಈ ಮನವಿಯ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ಪಂಚಾಯತ್ ಸೂಚಿಸಿದೆ.
ತುಳುವರ ಆಕ್ರೋಶ:
ಸಾಮಾನ್ಯವಾಗಿ ತುಳುನಾಡಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಹಾಗೂ ಕನ್ನಡ ಭಾಷೆ ಬಳಕೆ ಮಾಡುತ್ತಾರೆ. ಪಂಚಾಯತ್ ಅಧ್ಯಕ್ಷರು, ಸದಸ್ಯರು ನಾಗರಿಕರೊಂದಿಗೆ ತುಳು ಭಾಷೆಯಲ್ಲಿ ಚರ್ಚೆ ನಡೆಸುತ್ತಾರೆ. ಕೆಲವೊಮ್ಮೆ ಬ್ಯಾರಿ ಭಾಷೆಯಲ್ಲೂ ಚರ್ಚೆ ನಡೆಯುವುದಿದೆ. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಈ ರೀತಿಯ ಬೇರೆ ಬೇರೆ ಭಾಷಾ ಪ್ರಯೋಗಗಳು ಪಂಚಾಯತ್‌ನಲ್ಲಿ ಗಣನೆಗೆ ಬರುವುದಿಲ್ಲ. ಮುಖ್ಯವಾಗಿ ತುಳುನಾಡಿನ ಹಳ್ಳಿಯ ಕೆಲವು ಜನರಿಗೆ ಕನ್ನಡ ಭಾಷೆ ಬರುವುದಿಲ್ಲ. ಹಾಗಾಗಿ ಅವರು ತುಳು ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಆದರೆ ಇದೀಗ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಪ್ರಯೋಗಿಸದಂತೆ ಕ್ರಮ ಕೈಗೊಳ್ಳಲು ಸೂಚಿಸಿರುವುದು ತುಳುವರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದಲ್ಲದೆ, ಈ ಸುತ್ತೋಲೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುಂತೆ ತುಳುನಾಡಿನ ನೆಟ್ಟಿಗರು ಮನವಿ ಮಾಡಿದ್ದಾರೆ.