ಕಣ್ಣೂರು: ತನ್ನ ಸ್ನೇಹಿತನೊಂದಿಗೆ ಮಾತನಾಡಿದ್ದಕ್ಕಾಗಿ ಎಸ್‌ಡಿಪಿಐ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿಗೊಳಗಾಗಿ ಅವಮಾನಕ್ಕೀಡಾದ ರಸೀನಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಸಲಿಗೆ ಆಕೆ ನೈತಿಕ ಪೊಲೀಸ್‌ಗಿರಿಯಿಂದ ಅವಮಾನಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ʻಆನ್‌ಮನೋರಮಾʼ ವರದಿ ಮಾಡಿದೆ.
ವರದಿಯ ಪ್ರಕಾರ, ರಸೀನಾಳ ಪುರುಷ ಸ್ನೇಹಿತ ಹಣ ಸುಲಿಗೆ ಮಾಡಿರುವುದೇ ಆಕೆಯ ಸಾವಿಗೆ ಕಾರಣವಾಯಿತು. ಯಾವುದೇ ನೈತಿಕ ಪೊಲೀಸ್ ಗಿರಿಯಿಂದಾಗಲೀ, ಸಂಬಂಧಿಕರ ಕಾರಣದಿಂದಾಗಲೀ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ ಎಂದು ಆಕೆಯ ತಾಯಿ ಹೇಳಿದ್ದಾಗಿ ವರದಿ ಮಾಡಿದೆ.
ಜೂನ್ 15 ರಂದು ಕಾಯಲೋಡ್ ಮೂಲದ ರಸೀನಾ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಮಯ್ಯಿಲ್ ಮೂಲದ ತನ್ನ ಪುರುಷ ಸ್ನೇಹಿತನೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಕೆಲವು ಸ್ಥಳೀಯರು ಇಬ್ಬರ ಮುಂದೆ ಬಂದು, ಪ್ರಶ್ನಿಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿ.ಸಿ. ಮುಬಾಶಿರ್, ಕೆ.ಎ. ಫೈಸಲ್ ಮತ್ತು ವಿ.ಕೆ. ರಫ್ನಾಸ್ ಅವರನ್ನು ಬಂಧಿಸಿದ್ದರು. ಈ ಮೂವರೂ ಎಸ್‌ಡಿಪಿಐ ಕಾರ್ಯಕರ್ತರಾಗಿದ್ದಾರೆ.
ವಿಶೇಷವೆಂದರೆ ರಸೀನಾ ತನ್ನ ಡೆತ್‌ನೋಟಲ್ಲಿ ಮೂವರು ಆರೋಪಿಗಳ ಹೆಸರಿದ್ದು, ಅವರು ತನಗೆ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಆಕೆಯ ತಾಯಿ ತದ್ವಿರುದ್ಧ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ. ತಾಯಿಯ ಆರೋಪಗಳನ್ನು ಸ್ವೀಕರಿಸಿದ ಪೊಲೀಸರು, ಮೃತ ಮಹಿಳೆ ಮತ್ತು ಆಕೆಯ ಸ್ನೇಹಿತನ ನಡುವಿನ ಹಣಕಾಸಿನ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲಿದ್ದಾರೆ.
ರಸೀನಾ ಜೂನ್ 16 ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಡ್ರೀಮ್ ಡೀಲ್ ಗೆ ಸೇರಿ ಭರ್ಜರಿ ಗಿಫ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ