ಮಂಗಳೂರು: ದ.ಕ. ಜಿಲ್ಲೆ ಗ್ರಾಮ ಪಂಚಾಯತುಗಳಲ್ಲಿ ಸುಮಾರು 150-200ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರು, ಕಸ ಸಾಗಿಸುವ ವಾಹನ ಚಾಲಕರ ಗುತ್ತಿಗೆ ಪದ್ಧತಿ ರದ್ದು ಪಡಿಸಿ, ಪಂಚಾಯತ್ ವತಿಯಿಂದಲೇ ನೇರನೇಮಕಾತಿ, ನೇರಪಾವತಿ, ಕನಿಷ್ಟ ವೇತನ, ಪಿ.ಎಫ್, ಇಎಸ್‌ಐ ಮುಂತಾದ ಸೌಲಭ್ಯಗಳನ್ನು ನೀಡುವಂತೆ ಜಿಲ್ಲಾ ಪೌರಕಾರ್ಮಿಕ ಹಾಗೂ 4ನೇ ದರ್ಜೆ ನೌಕರರ ಸಂಘದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಪಿ. ಆನಂದ್ ಒತ್ತಾಯಿಸಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪೌರಕಾರ್ಮಿಕರು, ಕಸ ಸಾಗಿಸುವ ವಾಹನ ಚಾಲಕರು ಸುಮಾರು 10-15 ವರ್ಷಗಳಿಂದ ಕನಿಷ್ಟ ವೇತನ ಹಾಗೂ ಇಎಸ್‌ಐ, ಪಿಎಫ್, ಪಿಂಚಣಿ ಮುಂತಾದ ಸವಲತ್ತುಗಳು ಇಲ್ಲದೆ ದುಡಿಯುತ್ತಿದ್ದಾರೆ. ಇವರನ್ನು ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ವತಿಯಿಂದ ಸರಕಾರ ನಿಗದಿಪಡಿಸಿದ ಕನಿಷ್ಟ ವೇತನವನ್ನು ಸಂಜೀವಿನಿ ಒಕ್ಕೂಟಕ್ಕೆ ಗ್ರಾಮ ಪಂಚಾಯತ್‌ಗಳು ಪಾವತಿಸಿದರೂ ಒಕ್ಕೂಟದ ಗುತ್ತಿಗೆದಾರರು ಮಾತ್ರ ಪೌರಕಾರ್ಮಿಕರಿಗೆ ದಿನಕ್ಕೆ ಕೇವಲ ರೂ. 300-400 ಮಾತ್ರ ನೀಡಿ ಇತರ ಯಾವುದೇ ಸವಲತ್ತನ್ನು ನೀಡದೆ ವಂಚಿಸಿದ್ದಾರೆ. ಕೇವಲ 15-20 ದಿನಗಳ ಕೆಲಸ ನೀಡಿ ಅವರ ಜೀವನವನ್ನು ನರಕಸದೃಶ್ಯ ಮಾಡುತ್ತಿದ್ದಾರೆ. ಈ ವೃತ್ತಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಮತ್ತು ಇತರ ಜಾತಿ ಸಮುದಾಯದವರು ದುಡಿಯುತ್ತಿದ್ದು ಇವರಿಗೆ ಭದ್ರತೆ ಕೂಡಾ ಇಲ್ಲ. ಗುತ್ತಿಗೆದಾರರ ದಬ್ಬಾಳಿಕೆಯಿಂದ ಹೆದರಿ ಹೆದರಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ಉಳ್ಳಾಲ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ, ಮಂಗಳೂರು ತಾಲೂಕಿನನಲ್ಲಿ 10-15 ವರ್ಷಗಳಿಂದ ಸ್ವಚ್ಛತೆ ಕೆಲಸದಲ್ಲಿ ದುಡಿಯುತ್ತಿದ್ದರೂ ಕೆಲಸ ಖಾಯಂಗೊಳಿಸಲಾಗಿಲ್ಲ. ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರಿಗೆ ಹಣ ಮಾಡಲು ನಮ್ಮ ಕನಿಷ್ಟ ವೇತನ ಮುಂತಾದ ಸವಲತ್ತುಗಳಿಂದ ವಂಚಿಸುವುದು ಯಾವ ನ್ಯಾಯ? ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಸಂಜೀವಿನಿ ಒಕ್ಕೂಟ ಗುತ್ತಿಗೆಯನ್ನು ರದ್ದುಪಡಿಸಿ ಪೌರಕಾರ್ಮಿರನ್ನು ಗ್ರಾಮ ಪಂಚಾಯತುಗಳೇ ನೇರವಾಗಿ ನೇಮಿಸಿ ಸರಕಾರ ನಿಗದಿಪಡಿಸಿದ ವೇತನ, ಇಎಸ್‌ಐ, ಪಿಎಫ್ ಮುಂತಾದ ಸವಲತ್ತುಗಳನ್ನು ನೀಡಬೇಕು. ಅಲ್ಲದೆ ಅವರ ಸೇವಾ ಅವಧಿಯನ್ನು ಪರಿಗಣಿಸಿ ಖಾಯಂ ಪೌರಕಾರ್ಮಿಕರಾಗಿ ನೇರನೇಮಕಾತಿ ಮಾಡುವಂತೆ ಆಗ್ರಹಿಸಿದರು. ಅಲ್ಲದೆ ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಪ್ರೀಯಾಂಕ ಖರ್ಗೆಗೆ ಮನವಿಯನ್ನು ಸಲ್ಲಿಸಿರುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಲವರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj