ಕೇರಳದಲ್ಲಿ ಶತ್ರುಸಂಹಾರ ಪೂಜೆ ನಡೆಸಿದ ಬೆನ್ನಲ್ಲೇ ಕೊಟ್ಟಿಯೂರ್‌ ದೇಗುಲಕ್ಕೆ ಭೇಟಿ ನೀಡಿದ ದರ್ಶನ್

ಮಂಗಳೂರು: ಕಣ್ಣೂರು ಬಳಿಯ ಶ್ರೀಕ್ಷೇತ್ರ ಮಡಾಯಿ ಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆ ಸಲ್ಲಿಸಿದ್ದ ಸ್ಯಾಂಡಲ್‌ ವುಡ್‌ ಖ್ಯಾತ ನಟ, ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೇರಳ ಕಣ್ಣೂರಿನ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡೆವಿಲ್‌ ಚಿತ್ರೀಕರಣ ಮುಕ್ತಾಯಗೊಂಡು ಫ್ರೀ ಮೋಡ್‌ನಲ್ಲಿರುವ ದರ್ಶನ್‌ ಜೊತೆ ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಕೂಡ ಸಾಥ್ ನೀಡಿದ್ದರು. ಕೊಟ್ಟಿಯೂರ್‌ ನಲ್ಲಿ ದರ್ಶನ್‌ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿವರ್ಷವೂ ವೈಶಾಖ ಮಾಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಸ್ಥಾನವು ದಕ್ಷಿಣ ಕಾಶಿ ಎಂದು ಕರೆಯಲ್ಪಡುವುದರಿಂದ ಅದರ ಧಾರ್ಮಿಕ ಮಹತ್ವವು ಅಪಾರವಾಗಿದೆ.

ಕೊಟ್ಟಿಯೂರಿನಲ್ಲಿ ಎರಡು ದೇವಸ್ಥಾನಗಳಿವೆ. ಇಕ್ಕರೆ ಕೊಟ್ಟಿಯೂರು ಮತ್ತು ಅಕ್ಕರೆ ಕೊಟ್ಟಿಯೂರು. ಅಕ್ಕರೆ ಕೊಟ್ಟಿಯೂರು ದೇವಾಲಯವು ವೈಶಾಖ ಮಹೋತ್ಸವದ ಸಮಯದಲ್ಲಿ ಮಾತ್ರ ತೆರೆಯಲ್ಪಡುವ ತಾತ್ಕಾಲಿಕ ಮಂದಿರವಾಗಿದೆ. ಆದರೆ ಇಕ್ಕರೆ ಕೊಟ್ಟಿಯೂರು ದೇವಾಲಯವು ನಿಯಮಿತ ಪೂಜಾ ವಿಧಿಗಳನ್ನು ನಡೆಸುವ ಶಾಶ್ವತ ಮಂದಿರವಾಗಿದೆ. ಇಲ್ಲಿನ ವೈಶಾಖ ಮಹೋತ್ಸವ ಸುಮಾರು 28 ದಿನಗಳವರೆಗೆ ನಡೆಯುತ್ತದೆ. ಈ ವರ್ಷ ಜೂ.8ರಿಂದ ಪ್ರಾರಂಭವಾಗಿ ಜು.4ರವರೆಗೆ ದೇವಸ್ಥಾನ ತೆರೆದಿರುತ್ತದೆ. ಆದರೆ ಜೂ.30ರ ನಂತರ ಮಹಿಳಾ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಜೊತೆಗೆ ಇಲ್ಲಿ ಬರುವ ಭಕ್ತಾದಿಗಳಿಗೆ ತಂಗಲು ವಸತಿ ಸೌಲಭ್ಯವು ಇರುತ್ತದೆ. ದೇವಸ್ಥಾನವು ಬೆಳಿಗ್ಗೆ 5ರಿಂದ ರಾತ್ರಿ 8:30ರವರೆಗೆ ಮಾತ್ರ ತೆರೆದಿರುತ್ತದೆ.

ಇಲ್ಲಿ ನಡೆಯುವ ಜಾತ್ರೆ ʻಕೊಟ್ಟಿಯೂರು ಉತ್ಸವʼ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದು, ಇದು ದಕ್ಷಿಣ ಭಾರತದ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಪಾರ್ವತಿಯ ತಪಸ್ಸು, ದಕ್ಷಿಣ ಯಾಗ ಮತ್ತು ಶೈವ ಪರಂಪರೆಯ ಕಥೆಗಳ ಸ್ಮರಣಾರ್ಥವಾಗಿ ಈ ಉತ್ಸವ ಆಚರಿಸಲಾಗುತ್ತದೆ.

ಕ್ಷೇತ್ರದ ಹಿನ್ನೆಲೆ: ಕೇರಳದ ಕಣ್ಣೂರು ಜಿಲ್ಲೆಯ ಭಾಗವಾಗಿರುವ ಮತ್ತು ತಲಶ್ಶೇರಿಯಿಂದ 60 ಕಿಲೋ ಮೀಟರ್ ದೂರದಲ್ಲಿರುವ ವಾವಲಿ ಅಥವಾ ಬಾವಲಿ ನದಿ ತಟದಲ್ಲಿರುವ ಕೊಟ್ಟಿಯೂರಿನ ಶಿವ ದೇವಾಲಯವು ತನ್ನ ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ವಿಶ್ವ ವಿಖ್ಯಾತವಾಗಿದ್ದು ದಕ್ಷಿಣ ಕಾಶಿ ಎಂದೂ ಸಹಾ ಪ್ರಸಿದ್ಧವಾಗಿದೆ. ಇದೇ ಸ್ಥಳದಲ್ಲೇ ಪರ ಶಿವನ ಮೊದಲನೇ ಪತ್ನಿ ದಾಕ್ಷಾಯಿಣಿಯ ತಂದೆ ದಕ್ಷನು ಯಾಗವನ್ನು ಮಾಡಿ ಆ ಯಾಗಕ್ಕೆ ಸ್ಮಶಾನವಾಸಿ ಭಸ್ಮಧಾರಿ ಶಿವವನ್ನು ಆಹ್ವಾನಿಸದೇ ಇದ್ದಾಗ ಬೇಸರಗೊಂಡ ದಾಕ್ಷಾಯಿಣಿ ಅದೇ ಯಜ್ಞ ಕುಂಡದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಸ್ಮರಣೆಗಾಗಿ ಪ್ರತೀ ವರ್ಷ ವೈಶಾಖ ಮಾಸದಲ್ಲಿ ಕೇವಲ 28 ದಿನಗಳ ಕಾಲ ಇಲ್ಲಿರುವ ಒಂದು ದೇವಾಲಯವು ತೆರೆದಿದ್ದು ಅಲ್ಲಿ ನಡೆಯುವ ವೈಶಾಖ ಪೂಜೆಯ ಭಾಗವಾಗಲು ಪ್ರಪಂಚಾದ್ಯಂತ ಇರುವ ಲಕ್ಷಾಂತರ ಭಕ್ತಾದಿಗಳು ಇಲ್ಲಿ ಬರುತ್ತಾರೆ.

 

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!