ಮಂಗಳೂರು: ಮುಂಗಾರು ಮುಂಚಿನ ಮಳೆಯಲ್ಲೇ ಸ್ಮಾರ್ಟ್ ಸಿಟಿ ಮಂಗಳೂರು ಮುಳುಗಡೆಯಾಗಿದ್ದು, ಇದೀಗ ಮುಂಗಾರು ಮಳೆಯಲ್ಲಿ ಅಕ್ಷರಸಃ ಕಡಲಿನಂತಾಗಿದೆ. ಚರಂಡಿ, ತೋಡುಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆಯಲ್ಲೇ ನದಿಯಂತೆ ಹರಿದು ವಾಹನ ಸವಾರರು ಪರದಾಡಿದ್ದಾರೆ
ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಮಂಗಳೂರು ನಗರದಲ್ಲಿ ಮಧ್ಯಾಹ್ನದ ಬಳಿಕ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಗರದ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರದ ಪಂಪ್ ವೆಲ್ ಫ್ಲೈಓವರ್ ನ ಕೆಳಭಾಗದಲ್ಲಿ ಇರುವ ಸರ್ವಿಸ್ ರಸ್ತೆಗಳಲ್ಲಿ ನೀರು ತುಂಬಿ ವಾಹನ ಓಡಾಟಕ್ಕೆ, ಜನ ಸಂಚಾರಕ್ಕೆ ಅಡಚಣೆಯಾಗಿದೆ.
ಕೂಳೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿಯಂತೆ ನೀರು ಹರಿದು ವಾಹನಗಳು ರಸ್ತೆಯಲ್ಲೇ ಕೆಟ್ಟು ನಿಂತಿದೆ. ಬುಲ್ಡೋಜರ್ನಲ್ಲಿ ಚರಂಡಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ರಸ್ತೆ ಪಕ್ಕದ ತೋಡು ಮುಚ್ಚಿರುವುದರಿಂದಲೇ ಈ ಪರಿಸ್ಥಿತಿ ಬಂದೊದಗಿದೆ. ಮುಂಚೆಯೇ ತೋಡು ತೆರವು ಮಾಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಜನರು ಆರೋಪಿಸಿದ್ದಾರೆ.
ರಸ್ತೆಯಲ್ಲಿ ನಿಂತ ನೀರಿನಿಂದ ಬಸ್ಸೊಂದು ಕೆಟ್ಟು ನಿಂತಿದ್ದು, ಸಾರ್ವಜನಿಕರು ಬಸ್ಸನ್ನು ರಸ್ತೆ ಬದಿಗೆ ತಳ್ಳಿದ್ದಾರೆ. ಇನ್ನು ಪಡೀಲ್ ರೈಲ್ವೆ ಅಂಡರ್ ಪಾಸ್ ನಲ್ಲಿಯೂ ರಸ್ತೆಯಲ್ಲಿ ನೀರು ತುಂಬಿ ವಾಹನ ಓಡಾಟಕ್ಕೆ ಅಡಚಣೆಯಾಗಿದೆ. ನಗರದ ಕಾರ್ ಸ್ಟ್ರೀಟ್ ನಲ್ಲಿ ಕೃತಕ ನೆರೆಗೆ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ತುಂಬಿದ್ದು, ಮನೆಯೊಳಗೆ ನೀರು ನುಗ್ಗಿದೆ.
ಹವಾಮಾನ ಇಲಾಖೆ ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದರೂ ಜಿಲ್ಲೆಯಲ್ಲಿ ಭಾರೀ ಮಳೆ ಆಗಿರಲಿಲ್ಲ. ಆದರೆ, ಇಂದು ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು, ದಟ್ಟ ಮೋಡಗಳು ಇನ್ನಷ್ಟು ಮಳೆಯ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 16ರ ಮುಂಜಾನೆ ವರೆಗೆ ರೆಡ್ ಅಲರ್ಟ್ ಎಚ್ಚರಿಕೆ ಇದ್ದು, ಇನ್ನಷ್ಟು ಭಾರಿ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ.