ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಮುಂಬರುವ ಮಿಷನ್ ಜೂನ್ 19ರಂದು ಉಡಾವಣೆಗೊಳ್ಳಲಿದೆ. ಜೂನ್ 11ಕ್ಕೆ ಈ ಮಿಷನ್ ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಅದು ಮುಂದೂಡಲ್ಪಟ್ಟಿತ್ತು. ಈಗ ಫಾಲ್ಕನ್ 9 ರಾಕೆಟ್‌ನಲ್ಲಿನ ದ್ರವ ಆಮ್ಲಜನಕ ಸೋರಿಕೆಯನ್ನು ಆಕ್ಸಿಯಮ್ ಸ್ಪೇಸ್ ಕಂಪನಿ ಯಶಸ್ವಿಯಾಗಿ ಪರಿಹರಿಸಿದೆ ಎಂದು ಇಸ್ರೋ ಘೋಷಿಸಿದೆ.
ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್‌ನೊಂದಿಗಿನ ಸಭೆಯಲ್ಲಿ ಫಾಲ್ಕನ್ 9 ಉಡಾವಣಾ ವಾಹನದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲಾಗಿದೆ ಎಂದು ತಂಡಗಳು ಸ್ಪಷ್ಟಪಡಿಸಿವೆ ಎಂದು ಇಸ್ರೋ ದೃಢಪಡಿಸಿದೆ. ಹಾಗೇ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಜ್ವೆಜ್ಡಾ ಸೇವಾ ಮಾಡ್ಯೂಲ್‌ನಲ್ಲಿನ ಒತ್ತಡವನ್ನು ನಿರ್ಣಯಿಸಲು ನಾಸಾದೊಂದಿಗೆನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಆಕ್ಸಿಯಮ್ ಸ್ಪೇಸ್ ತಿಳಿಸಿದೆ.
ಜೂನ್ 11ರಂದು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ ಸ್ಪೇಸ್ ಮಿಷನ್ ಉಡಾವಣೆಗೊಳ್ಳಬೇಕಿತ್ತು. ಆದರೆ ಸ್ಪೇಸ್‌ಎಕ್ಸ್‌ನ ಫಾಲ್ಕನ್ -9 ರಾಕೆಟ್‌ನಲ್ಲಿ ಇಂಧನ ಸೋರಿಕೆ ಮತ್ತು ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್) ರಷ್ಯಾದ ವಿಭಾಗದಲ್ಲಿ ಸೋರಿಕೆಯಿಂದಾಗಿ ಮೊದಲು ವಿಳಂಬವಾಯಿತು. ಈ ಆಕ್ಸಿಯಮ್ ಸ್ಪೇಸ್ ಮಿಷನ್ನಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಕೂಡ ಇದ್ದಾರೆ. ಶುಭಾಂಶು ಅವರನ್ನೊಳಗೊಂಡು 4 ಗಗನಯಾತ್ರಿಗಳನ್ನು ಹೊತ್ತೊಯ್ಯುವ ಈ ಮಿಷನ್ ಅನ್ನು ಮೇ 29ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ನಂತರ ಜೂನ್ 8, ಜೂನ್ 10 ಮತ್ತು ಜೂನ್ 11ಕ್ಕೆ ಆ ದಿನಾಂಕವನ್ನು ಮುಂದೂಡಲಾಯಿತು. ಇದೀಗ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿದೆ.