ವಿಶ್ವಹಿಂದೂ ಪರಿಷತ್‌ ದೂರು: ಅಯೋಧ್ಯೆಯಲ್ಲಿ ವಾರ್ಷಿಕ ಉರೂಸ್‌ ನಿಷೇಧ

ಅಯೋಧ್ಯೆ / ಉತ್ತರ ಪ್ರದೇಶ: ವಿಶ್ವ ಹಿಂದೂ ಪರಿಷತ್‌ ದೂರು ನೀಡಿದ ಪ್ರಕಾರ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸ್ಥಳೀಯ ಆಡಳಿತವು ಅಯೋಧ್ಯೆಯಲ್ಲಿ ವಾರ್ಷಿಕ ‘ಉರುಸ್’ ಸಮಾರಂಭವನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Representative image

ಕಳೆದ ಎರಡು ದಶಕಗಳಿಂದ ನಡೆದುಕೊಂಡು ಬರುತ್ತಿದ್ದ ‘ಉರುಸ್’ ಸಮಾರಂಭವು ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿತ್ತು.

ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಸದಸ್ಯರಾದ ಲಾಲ್ಜಿ ಶರ್ಮಾ ಮತ್ತು ಸೂರ್ಯಕಾಂತ್ ಪಾಂಡೆ ಅವರು ನೀಡಿದ ದೂರಿನ ಮೇರೆಗೆ ಅಯೋಧ್ಯೆಯ ಸ್ಥಳೀಯ ಆಡಳಿತವು ಖಾನ್‌ಪುರ ಮಸೋಧಾ ಪ್ರದೇಶದ ದಾದಾ ಮಿಯಾ ಬಜಾರ್‌ನಲ್ಲಿ ಪ್ರತಿ ವರ್ಷ ನಡೆಯುವ ‘ದಾದಾ ಮಿಯಾ ಉರುಸ್‌’ಗೆ ಅನುಮತಿ ನಿರಾಕರಿಸಿದೆ ಎಂದು ವರದಿಯಾಗಿದೆ.

‘ಉರುಸ್ ದಾದಾ ಮಿಯಾ’ ಹೆಸರಿನಲ್ಲಿ ಉರುಸ್‌ ಸಮಾವೇಶ ಆಯೋಜಿಸಲು ಆಯೋಜಕರು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದಾರೆ. ಆದಾಗ್ಯೂ, ‘ಘಾಜಿ ಬಾಬಾ ಉರುಸ್‌’ ಹೆಸರಿನಲ್ಲಿ ರಶೀದಿಗಳನ್ನು ಮುದ್ರಿಸುವ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಶುತೋಷ್ ತಿವಾರಿ ತಿಳಿಸಿದ್ದಾರೆ.

ಉರುಸ್‌ ಆಚರಣೆ ವೇಳೆ ಆಯೋಜಕರು ಮಾಟಮಂತ್ರ ಮಾಡುವ ಮತ್ತು ಜನರನ್ನು ತಪ್ಪುದಾರಿಗೆಳೆಯುವಂತಹವರನ್ನು ಆಹ್ವಾನಿಸುತ್ತಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

error: Content is protected !!