ಮಂಗಳೂರು: ಮಳಲಿಯ ಬಡಗುಳಿಪಾಡಿ ಗ್ರಾಮದ ಮರ್ಖಾಸ್ ನಗರದ ನಿರ್ಜನ ಪ್ರದೇಶದಲ್ಲಿ ಯಾರೋ ಅಕ್ರಮವಾಗಿ ಸಂಗ್ರಹಿಸಿಟ್ಟ ಸುಮಾರು 15 ಟಿಪ್ಪರ್ ಲೋಡ್ನಷ್ಟು ಮರಳನ್ನು ಬಜಪೆ ಪೊಲೀಸರು ಜೂ. 12ರಂದು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ. ಇದರಿಂದ ಮರಳು ಸಂಗ್ರಹಿಸಿಟ್ಟ ಅಪರಿಚಿತ ವ್ಯಕ್ತಿಗೆ ʻಮರ್ಕಸಂಕಟʼ ಉಂಟಾಗಿದೆ. ಈ ಮರಳು ತನ್ನದೆಂದು ಹೇಳಿಕೊಂಡು ಯಾರೂ ಮುಂದೆ ಬಂದಿಲ್ಲ ಎಂದು ತಿಳಿದುಬಂದಿಲ್ಲ.
ಬಜಪೆ ಠಾಣಾ ಬೀಟ್ ಪೊಲೀಸ್ ಬಸವ ರಾಜ್ ಅವರಿಗೆ ತನ್ನ ಬೀಟ್ ವ್ಯಾಪ್ತಿಯ ಮರ್ಖಾಸ್ ನಗರದ ನಿರ್ಜನ ಪ್ರದೇಶದಲ್ಲಿ ಯಾರೋ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿರುವುದನ್ನು ಪತ್ತೆಹಚ್ಚಿ ಬಜಪೆ ಎಸ್ಐ ಕುಮಾರೇಶನ್ ಅವರಿಗೆ ತಿಳಿಸಿದ್ದರು. ಅವರು ಎಚ್ಸಿ ಸುಜನ್ ಜತೆ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ 15 ಟಿಪ್ಪರ್ ಲೋಡ್ (40-45 ಯುನಿಟ್ ) ನಷ್ಟು ಮರಳನ್ನು ಯಾರೋ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. ಹೀಗಾಗಿ ಇದನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಮರಳಿನ ಮೌಲ್ಯ ಸುಮಾರು 1 ಲಕ್ಷದ 20 ಸಾವಿರ ರೂ. ಎಂದು ಅಂದಾಜಿಸಲಾಗಿದೆ.